ಕೊಡಗು: ಒಂದೆಡೆ ಭಾರಿ ಮಳೆ, ಇನ್ನೊಂದೆಡೆ ಭಾರಿ ಮಳೆಗೆ ಕುಸಿಯುತ್ತಿರುವ ಗುಡ್ಡಗಳು, ಮತ್ತೊಂದೆಡೆ ಜಲಾವೃತಗೊಂಡಿರುವ ಮನೆ, ಜಮೀನು ಇದೆಲ್ಲ ಸದ್ಯ ಕೊಡಗು ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿರುವ ಅವಾಂತರ. ಕೊಡಗಿನಲ್ಲಿ ಮಳೆ ಮುಂದುವರೆದಿದ್ದರೆ, ಗಡಿ ಭಾಗ ಚಂಬು ಗ್ರಾಮದಲ್ಲಿ ಇಂದು ಮುಂಜಾನೆ ಹೊತ್ತಿನಲ್ಲಿ ಭೂಮಿ ಕಂಪಿಸಿರುವುದಕ್ಕೆ ಜನ ಭಯಬೀತರಾಗಿದ್ದಾರೆ. ಅಲ್ಲದೆ ಜೋಡುಪಾಲದ ಮಂಗಳೂರು ಮುಖ್ಯ ರಸ್ತೆಯಲ್ಲಿ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಬೆಟ್ಟದ ಮೇಲಿಂದ ಮಣ್ಣು ಕುಸಿತವಾಗಿದ್ದು, ಶಾಲೆಗೆ ರಜೆ ಇದ್ದುದರಿಂದ ಅನಾಹುತ ತಪ್ಪಿದೆ.
ಕೊಡಗು ಗಡಿ ಭಾಗ ಮತ್ತು ಮಂಗಳೂರು ಗಡಿ ಭಾಗದ ಜೋಡುಪಾಲ ಗ್ರಾಮದಲ್ಲಿ ಜಲ ಪ್ರಳಯದ ಆತಂಕ ಸೃಷ್ಟಿಯಾಗಿದ್ದು, ರಾತ್ರಿ ಸುರಿದ ಮಳೆಗೆ ನೀರು ಮನೆಗಳಿಗೆ ನುಗ್ಗಿ ನಾಲ್ಕು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಮನೆಯಲ್ಲಿ ಇದ್ದವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ. ಗಡಿ ಭಾಗದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ಬಾರಿ ಅನಾಹುತಗಳನ್ನು ಸೃಷ್ಟಿ ಮಾಡುತ್ತಿದೆ. ಹೀಗಾಗಿ ಜನರು ಭಯದಲ್ಲೇ ಜೀವನ ಸಾಗಿಸುವಂತಾಗಿದೆ.