ಕೊಡಗು:ಹಾರಂಗಿ ಜಲಾಶಯದಲ್ಲಿ ನೀರಿನ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲವೆಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೈಗೆತ್ತಿಕೊಂಡ ಹೈಕೋರ್ಟ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭಾರೀ ಮಳೆ ಬೀಳುವುದರಿಂದ ಜಲಾಶಯದಲ್ಲಿ ಶೇ. 50ರಷ್ಟು ಮಾತ್ರ ನೀರು ಸಂಗ್ರಹಿಸಿಟ್ಟುಕೊಂಡು ಉಳಿದ ನೀರನ್ನು ನದಿಗೆ ಹರಿಸಬಹುದೇ ಎಂದು ಅಭಿಪ್ರಾಯ ಕೇಳಿ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.
2018ರಲ್ಲಿ ಕುಶಾಲನಗರ ಕೂಡಿಗೆ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ಸಾವಿರಾರು ಮನೆಗಳು ಮುಳುಗಡೆಯಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಇದಕ್ಕೆ ನೇರ ಹೊಣೆ ಹಾರಂಗಿ ಜಲಾಶಯ. ಇಲ್ಲಿ ನೀರಿನ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡದಿರುವುದೇ ಅದಕ್ಕೆ ಕಾರಣ ಎಂದು ಪಿಐಎಲ್ ಸಲ್ಲಿಸಲಾಗಿದೆ.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಂದಾಬೆಳ್ಯಪ್ಪ, ಚಿತ್ರಸುಬ್ಬಯ್ಯ, ಮಾದಾಪುರದ ಪ್ರೀತು ಕಾರ್ಯಪ್ಪ, ಮಕ್ಕಂದೂರಿನ ರಮೇಶ್, ಹೆಬ್ಬೆಟಗೇರಿಯ ಪ್ರದೀಪ್ ಕೋರಹ್, ತಂತಿಪಾಲ ಗ್ರಾಮದ ಸತೀಶ್ ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಕೇಂದ್ರ ಜಲಸಚಿವಾಲಯ, ರಾಜ್ಯ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತ ಸೇರಿದಂತೆ 13 ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದೆ. ಅದಕ್ಕೆ ಸೂಕ್ತ ಉತ್ತರ ನೀಡುವಂತೆ ಸೂಚಿಸಿ ಆಗಸ್ಟ್ 10ಕ್ಕೆ ವಿಚಾರಣೆ ಮುಂದೂಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಈಗಾಗಲೇ ಜುಲೈ ಎರಡನೇ ವಾರದಲ್ಲಿ ಕೊಡಗಿನಲ್ಲಿ ಉತ್ತಮ ಮಳೆ ಬಿದ್ದಿದೆ. ಹೀಗಾಗಿ ಹಾರಂಗಿ ಬಹುತೇಕ ಭರ್ತಿಯಾಗುವ ಹಂತದಲ್ಲಿತ್ತು. ಅದನ್ನು ಮನಗಂಡು ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರು ಹರಿಸುವಂತೆ ಸೂಚಿಸಲಾಗಿತ್ತು. ಅದರಂತೆ ನದಿಗೆ ನೀರು ಹರಿಸಲಾಗಿದೆ. 2018ರಲ್ಲಿ ಪ್ರವಾಹ ಉಂಟಾಗಿದ್ದಕ್ಕೆ ಹಾರಂಗಿ ಜಲಾಶಯದ ನೀರಿನ ನಿರ್ವಹಣೆಯನ್ನು ಅವೈಜ್ಞಾನಿಕ ಮಾಡಿದ್ದೇ ಕಾರಣ. ಆದರೆ ಈ ಬಾರಿ ಆ ರೀತಿ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.