ಕೊಡಗು: ಮಂಜಿನ ನಗರಿ ಮಡಿಕೇರಿ ಮಳೆ ಆರ್ಭಟಕ್ಕೆ ಅಕ್ಷರಶಃ ನಲುಗಿದ್ದು, ವಿರಾಜಪೇಟೆ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಯ ಹೊದವಾಡದಲ್ಲಿ ಮನೆಯಲ್ಲಿ ಸಿಲುಕಿದ್ದಎರಡು ಕುಟುಂಬಗಳನ್ನು ಎನ್ ಡಿ ಆರ್ ಎಫ್ ತಂಡ ರಕ್ಷಿಸಿದೆ.
ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನಲೆಯಲ್ಲಿ ಎನ್ ಡಿ ಆರ್ ಎಫ್ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದು, ಮತ್ತೆರಡು ಕುಟುಂಬಗಳ ರಕ್ಷಣಾ ಕಾರ್ಯಾಚರಣೆಗೆ ಕತ್ತಲು ಅಡ್ಡಿ ಎದುರಾಗಿದೆ. ಕಾಫಿ ತೋಟದ ನಡುವೆ ಸಿಲುಕಿಕೊಂಡಿದ್ದ ಎರಡು ಕುಟುಂಬಗಳು ನೀರಿನ ಹರಿವು ಹೆಚ್ಚಿದಂತೆ ಸಂಕಷ್ಟಕ್ಕೆ ಸಿಲುಕಿದ್ದವು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿದ ಎರಡು ಕುಟುಂಬದ 5 ಮಂದಿಯನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ. ನಿರಾಶ್ರಿತರನ್ನು ನಾಪೋಕ್ಲು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕೆದಮಳ್ಳೂರು-ಬೋಯಿಕೇರಿ ಸಂಪರ್ಕ ರಸ್ತೆ ಜಲಾವೃತವಾಗಿದೆ. ರಸ್ತೆಯ ಮತ್ತೊಂದು ಬದಿಯ ಮನೆಗಳಲ್ಲಿನ ನಿರಾಶ್ರಿತರ ರಕ್ಷಣೆಗೆ ಎನ್ ಡಿ ಆರ್ಎಫ್ ಸನ್ನದ್ಧವಾಗಿದೆ. ಆದರೆ ಕತ್ತಲು ಹಾಗೂ ವಿಪರೀಪ ಮಳೆಯ ಪರಿಣಾಮ ಕಾರ್ಯಾಚರಣೆ ಅಸಾಧ್ಯ ಎಂದು ತಂಡ ವಾಪಾಸ್ ಮರಳಿದೆ. ಲೈನ್ ಮನೆಯಲ್ಲಿರುವ ಎರಡು ಕುಟುಂಬಗಳು ಸುರಕ್ಷಿತವಾಗಿದ್ದು, ಬೆಳಗ್ಗೆ ಮತ್ತೆ ವಿಪತ್ತು ನಿರ್ವಹಣಾ ಪಡೆಕಾರ್ಯಾಚರಣೆ ಪ್ರಾರಂಭಿಸಲಿದೆ ಎನ್ನಲಾಗಿದೆ.
ಮಂಜಿನ ನಗರಿಯಲ್ಲಿ ಮಳೆಯ ಅವಾಂತರ: ಎನ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯಚರಣೆ! ರಣಭೀಕರ ಮಳೆಗೆ ನಿರಾಶ್ರಿತ ಜನತೆಗೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಮೂರು ಪರಿಹಾರ ಕೇಂದ್ರಗಳನ್ನು ತೆರೆದಿದೆ. ಸೋಮವಾರಪೇಟೆ ತಾಲೂಕಿನ ಬೆಟ್ಟದ ಕಾಡಿನ ಅಂಗನವಾಡಿ ಕೇಂದ್ರದಲ್ಲಿ 5 ಕುಟುಂಬದ 25 ಮಂದಿಗೆ ಆಶ್ರಯ ನೀಡಿದೆ. ವಿರಾಜಪೇಟೆ ತಾಲೂಕಿನ ಕರಡಿಗೋಡು ಶಾಲೆಯ ಪರಿಹಾರ ಕೇಂದ್ರದಲ್ಲಿ 12 ಕುಟುಂಬದ 40 ಮಂದಿಗೆ ಆಶ್ರಯ ಕಲ್ಪಿಸಿದೆ. ವಿರಾಜಪೇಟೆ ತಾಲೂಕಿನ ನಾಪೋಕ್ಲು ಶಾಲೆಯ ಪರಿಹಾರ ಕೇಂದ್ರದಲ್ಲಿ 2 ಕುಟುಂಬದ 5 ಮಂದಿಗೆ ಆಶ್ರಯ ನೀಡಲಾಗಿದೆ. ಮಳೆ ಹೆಚ್ಚಾದಲ್ಲಿ ಮತ್ತಷ್ಟು ಪರಿಹಾರ ಕೇಂದ್ರ ತೆರೆಯಲು ಸಿದ್ಧತೆ ನಡೆಸಿದ್ದು, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಪ್ರಾರಂಭಿಸಿದೆ.
ವರುಣನ ಅಬ್ಬರಕ್ಕೆ ಕೊಡಗಿನ ರಸ್ತೆಗಳು ಅಪಾಯದಲ್ಲಿವೆ. ಜಿಲ್ಲೆಯ ರಸ್ತೆಗಳು ಜಲಾವೃತವಾಗಿವೆ. ರಾಜ್ಯ ಮತ್ತು ರಾಷ್ತ್ರೀಯ ಹೆದ್ದಾರಿಗಳು ಬಂದ್ ಆಗಿರುವುದರಿಂದ
ಜನರು ಪರದಾಡುವಂತಾಗಿದೆ. ಮಡಿಕೇರಿ- ಭಾಗಮಂಡಲ, ಭಾಗಮಂಡಲ-ತಲಕಾವೇರಿ, ಭಾಗಮಂಡಲ-ನಾಪೋಕ್ಲು ರಸ್ತೆ ಬಂದ್ ಆಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಬಳಿ ರಸ್ತೆಗಳು ಜಲಾವೃತವಾಗಿವೆ. ಫೈಬರ್ ಬೋಟ್, ರಿವರ್ ರಾಫ್ಟ್, ಅಗ್ನಿಶಾಮಕ ಸಿಬ್ಬಂದಿ ನಿಯೋಜಿಸಲಾಗಿದೆ.ವಿರಾಜಪೇಟೆ ಕಣ್ಣೂರು ರಸ್ತೆ ಮಾಕುಟ್ಟ ಬಳಿ ರಸ್ತೆ ಕುಸಿತ ರಸ್ತೆ ಬಂದ್ ಆಗಿದ್ದು, ವಿರಾಜಪೇಟೆ ಗೋಣಿಕೊಪ್ಪ ಕುಟ್ಟ ಮೂಲಕ ಕೇರಳಕ್ಕೆ ಪರ್ಯಾಯ ರಸ್ತೆ ಕಲ್ಪಿಸಲಾಗಿದೆ.
ಗಾಳಿಬೀಡು-ಪಾಟಿ-ಕಾಲೂರು ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಕೆ.ನಿಡುಗಣೆ-ಹೆಬ್ಬೆಟ್ಟಗೇರಿ-ದೇವಸ್ತೂರು-ಕಾಲೂರು ಪರ್ಯಾಯ ಮಾರ್ಗ ಒದಗಿಸಿದೆ. ಜಿಲ್ಲೆಯ ಮೂರೂ ತಾಲೂಕಿನ ಹತ್ತಕ್ಕೂ ಅಧಿಕ ಗ್ರಾಮೀಣ ರಸ್ತೆಗಳು ಕಲಾ ವೃತ ಬಾಯಿಗೆ. ರಸ್ತೆ ಸಂಪರ್ಕ ಕಡಿತಗೊಂಡ ಗ್ರಾಮಗಳ ಜನರ ಪರದಾಡುತ್ತಿದ್ದಾರೆ.ಸ್ಯಾಂಡ್ ಬ್ಯಾಗ್ ಗಳು ಕೊಚ್ಚಿ ಹೋಗುಗಿರುವ ಹಿನ್ನೆಲೆಯಲ್ಲಿ, ಎನ್.ಹೆಚ್.275 ಮತ್ತೊಮ್ಮೆ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ.ಅಪಾಯದ ಸ್ಥಳಗಳಲ್ಲಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿದೆ. ಪರ್ಯಾಯ ಮಾರ್ಗ ಬಳಸಿ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.