ಕೊಡಗಿನ ವಿಶಿಷ್ಠ ಸಂಸ್ಕೃತಿ ಪ್ರತೀಕ ಕೋವಿ ಹಬ್ಬ ಅದ್ಧೂರಿ ಆಚರಣೆ ಮಡಿಕೇರಿ (ಕೊಡಗು):ಕೊಡವ ಬುಡಕಟ್ಟು ಕುಲದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬಂದೂಕು ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನವಾಗಿದೆ. ಕೊಡಗಿನ ಆಚಾರ ವಿಚಾರ ಸಂಸ್ಕೃತಿ ಉಳಿಸಲು ಹಾಗೂ ಕೋವಿ ಮಹತ್ವ ತಿಳಿಯಲಿ ಎಂದು ಜಿಲ್ಲೆಯಲ್ಲಿ ಪ್ರತೀ ವರ್ಷ ಕೋವಿ ಹಬ್ಬ ಆಚರಣೆ ಮಾಡಲಾಗುತ್ತದೆ.
ಕೊಡಗಿನ ಜನರ ಆಚಾರ ವಿಚಾರಗಳು ಎಲ್ಲರಿಗಿಂತ ವಿಭಿನ್ನ. ಈ ಪುಟ್ಟ ಜಿಲ್ಲೆಯ ಹಬ್ಬದ ಆಚಾರಣೆಯಂತೂ ಎಂಥವರನ್ನೂ ಸೆಳೆಯುವಂತದ್ದು. ನಿಮ್ಗೆ ಗೊತ್ತಾ ಕೋವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡೋ ಇಲ್ಲಿನ ಜನರು ಕೋವಿಗೂ ಒಂದು ಹಬ್ಬ ಮಾಡ್ತಾರೆ.
ಕೊಡಗಿನ ಸಾಂಪ್ರದಾಯಿಕ ಶೈಲಿಯ ಉಡುಪು ತೊಟ್ಟು ಬಂದೂಕುಗಳನ್ನು ನೀಟಾಗಿ ಜೋಡಿಸಿ ಕೋವಿಗೆ ಶ್ರದ್ಧೆಯಿಂದ ನಮಿಸುತ್ತ ಆರಾಧಿಸಿದ ಜನ ನಂತರ ಅದನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡಿದರು.
ಈ ವಿಶೇಷ ಪದ್ಧತಿಯನ್ನು ಕಂಡ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಬಂದೂಕಿಗೆ ಇಷ್ಟೊಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿರುವ ಇವರೆಲ್ಲಾ ಕರ್ನಾಟಕದ ಹೆಮ್ಮೆಯ ಕೊಡವರು. ಕಾಫಿ ಪ್ರಕೃತಿ ಸೌಂದರ್ಯದ ಶ್ರೀಮಂತ ಜಿಲ್ಲೆ, ಯೋಧರ ನಾಡು ಎಂದು ಕರೆಸಿಕೊಳ್ಳುವ ಕೊಡಗಿನ ಪ್ರತಿಯೊಂದು ಆಚರಣೆಯೂ ಸ್ಪೆಷಲ್. ವೀರರು ಶೂರರ ನಾಡೆಂದು ಕರೆಸಿಕೊಳ್ಳುವ ಇಲ್ಲಿನ ಜನರ ಪ್ರತಿಯೊಂದು ಹಬ್ಬಕ್ಕೂ ಪ್ರಕೃತಿಗೂ ಸಂಬಂಧ ಇದ್ದೇ ಇರುತ್ತೆ.
ಸಿ ಎನ್ ಸಿ ಮುಖಂಡ ಎನ್ ಯು ನಾಚಪ್ಪ ಹಬ್ಬದ ಆಚರಣೆ ಕುರಿತು ಮಾಹಿತಿ ನೀಡಿದರು.. ಕೋವಿಗೆ ಪೂಜ್ಯಭಾವನೆ:ಇಂಡಿಯನ್ ಆರ್ಮ್ಸ್ ಆ್ಯಕ್ಟ್ ಸೆಕ್ಷನ್ ಮೂರರ ಪ್ರಕಾರ, ಇಲ್ಲಿನ ಜನರಿಗೆ ಕೋವಿ ಬಳಸಲು ವಿನಾಯಿತಿ ಕೂಡ ಇದೆ. ಕೊಡಗಿನ ಜನರ ಹಬ್ಬ ಹರಿದಿನ, ಹುಟ್ಟು ಸಾವು ಎಲ್ಲದರಲ್ಲಿಯೂ ಕೋವಿಗೆ ವಿಶೇಷ ಸ್ಥಾನ ನೀಡುತ್ತಾರೆ. ಬಂದೂಕು ಕೊಡವರಿಗೆ ಕೇವಲ ಒಂದು ಆಯುಧವಲ್ಲ, ಇದು ಇಲ್ಲಿನ ಜನರ ಧಾರ್ಮಿಕ ಸಂಕೇತ. ಕೊಡಗಿನಲ್ಲಿ ಕೋವಿಗೆ ಪೂಜ್ಯಭಾವನೆಯಿದೆ. ಪ್ರತಿಮನೆಯಲ್ಲಿಯೂ ಹಬ್ಬ ಹರಿದಿನಗಳಂದು ದೇವರಂತೆಯೇ ಕೋವಿಯನ್ನು ಸಹ ಪೂಜಿಸಲಾಗುತ್ತೆ. ಇದೆಲ್ಲದರ ಸಂಕೇತವಾಗಿ ಕೋವಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡೋ ಮೂಲಕ ಇಲ್ಲಿಯ ಜನರು ಸಂಭ್ರಮಿಸುತ್ತಾರೆ.
ಮಹತ್ವದ ಹಿನ್ನೆಲೆ: ಕಳೆದ 13 ವರ್ಷದಿಂದ ಕೊಡವ ನ್ಯಾಷನಲ್ ಕೌನ್ಸಿಲ್ (CNC) ಸಂಘಟನೆ ಕೊಡಗಿನಲ್ಲಿ ಕೋವಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಕೋವಿ ಹಬ್ಬವನ್ನು ಶುರುಮಾಡಲು ಕೂಡ ಒಂದು ಮಹತ್ವದ ಹಿನ್ನೆಲೆಯಿದೆ. ದೇಶದಲ್ಲಿ ಯಾರಿಗೂ ಇಲ್ಲದ ವಿಶೇಷ ವಿನಾಯಿತಿ ಕೊಡಗಿನ ಜನ್ರಿಗೆ ಕೋವಿ ಬಳಸಲು ಇದೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಧಾರ್ಮಿಕ ಸಂಕೇತ:ಇದೇ ಕಾರಣಕ್ಕೆ ಕೋವಿ ಕೊಡವರ ಪಾಲಿಗೆ ಕೇವಲ ಆಯುಧವಲ್ಲ, ಅದೊಂದು ಧಾರ್ಮಿಕ ಸಂಕೇತ. ಹಾಗಾಗಿ ಈಗಿನ ಯುವ ಪೀಳಿಗೆಗೆ ಕೋವಿಗೂ ಕೊಡಗಿನ ಜನರಿಗೂ ಇರೋ ಅವಿನಾಭಾವ ಸಂಬಂಧದ ಪರಂಪರೆಯನ್ನು ತಿಳಿಸಲು ಈ ಕೋವಿ ಉತ್ಸವ ಮಹತ್ವ ಪಡೆದಿದೆ. ಈ ಬಾರಿ ಕೋವಿ ಹಬ್ಬವನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಸಮೀಪದ ಅಜ್ಜಮಾಡ ಕುಟುಂಬದ ಐನ್ ಮನೆಯಲ್ಲಿ ನಡೆಸಲಾಯಿತು.
ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ:ಸಾಂಪ್ರದಾಯಿಕ ಉಡುಪಿನಲ್ಲಿ ಭಕ್ತಿಪೂರ್ವಕವಾಗಿ ಮೆರವಣಿಗೆ ಮಾಡಿ ಕೋವಿಯನ್ನು ತಂದು ಪೂಜಿಸಲಾಯ್ತು. ನಂತರ ಪುರುಷ ಮಹಿಳೆ ಎಂಬ ಭೇದವಿಲ್ಲದೆ, ಎಲ್ಲರೂ ತೆಂಗಿನಕಾಯಿಗೆ ಗುಂಡು ಹಾರಿಸೋ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ರು. ಬಂದೂಕು ಸಮೇತ ಮೆರವಣಿಗೆ ನಡೆಸಿದ ಸಾಂಪ್ರದಾಯಿಕ ಉಡುಗೆತೊಟ್ಟ ಜನರು ಮೈದಾನದಲ್ಲಿ ಜಮಾಯಿಸಿ ಬಂದೂಕು ತಮ್ಮ ಹಕ್ಕು ಎಂಬುದನ್ನ ಸಾರಿದ್ರು. ಇದಾದ ಬಳಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವರು ತಮ್ಮ ತಮ್ಮ ಕೋವಿಗಳೊಂದಿಗೆ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು. ಈ ವಿಶಿಷ್ಟ ಆಚರಣೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ಬದುಕಿನ ಅವಿಭಾಜ್ಯ ಅಂಗ:ಕೊಡವ ಬುಡಕಟ್ಟು ಕುಲದ ನಾಗರಿಕತೆ ಉಗಮವಾದಂದಿನಿಂದಲೂ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಅದೊಂದು ಪರಂಪರೆಯಾಗಿಯೂ, ಜೀವನ ವಿಧಾನವಾಗಿಯೂ ಮುಂದುವರೆದಿದೆ.
ಕಳೆದ 10 ವರ್ಷದಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಕೋವಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಕೊಳಗೇರಿಯಲ್ಲಿ ಶನಿವಾರ ನಡೆದ ಈ ವಿಶಿಷ್ಟ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲರೂ ಗುಂಡು ಹಾರಿಸಿ ಸಂಭ್ರಮಿಸಿದರು.
ಓದಿ:ಕಾವೇರಿಯ ಕೊಡಗಿನಲ್ಲಿ ಹುತ್ತರಿ ಸಂಭ್ರಮ; ಧಾನ್ಯ ಲಕ್ಷ್ಮಿಗೆ ವಿಶೇಷ ಪೂಜೆ