ತಲಕಾವೇರಿ(ಕೊಡಗು): ಬ್ರಹ್ಮಗಿರಿ ಬೆಟ್ಟಸಾಲು ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಇಂಗು ಗುಂಡಿಗಳನ್ನು ತೆಗೆಯಬಾರದು. ಅಲ್ಲಿ ಹೆಚ್ಚಾಗಿ ಮರಗಿಡಗಳನ್ನು ಬೆಳೆಸಬೇಕು ಎಂದು ಜಿಎಸ್‍ಐ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಅರಣ್ಯ ಇಲಾಖೆಗೆ ಸಲಹೆ ನೀಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದ ಸ್ಥಳಕ್ಕೆ ಜಿಐಎಸ್ ಪ್ರತಿನಿಧಿಗಳಾದ ಅಯಿಜಾಜ್ (ಜಮ್ಮು ಮತ್ತು ಕಾಶ್ಮೀರ), ಕಮಲ್ ಕುಮಾರ್ (ಉತ್ತರ ಪ್ರದೇಶ) ಮತ್ತು ಸೆಂಥಿಲ್ ಕುಮಾರ್ (ತಮಿಳುನಾಡು) ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದರು. ಅಲ್ಲದೆ ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ತೆಗೆಯದಂತೆ ತಾಕೀತು ಮಾಡಿದರು.
2018ರಿಂದ ಜಿಲ್ಲೆಯಲ್ಲಿ ನಿರಂತರವಾಗಿ ಭೂ ಕುಸಿತ ಹಾಗೂ ಪ್ರವಾಹಗಳು ಸಂಭವಿಸಿದ ಪರಿಣಾಮ ಸಾಕಷ್ಟು ನಷ್ಟ ಉಂಟಾಗಿದೆ. ಆದ್ದರಿಂದ ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಬೆಟ್ಟದ ಮೇಲ್ಭಾಗದಲ್ಲಿ ಇಂಗು ಗುಂಡಿ ತೆಗೆದಿರುವುದರಿಂದ ಭೂ ಕುಸಿತ ಉಂಟಾಯಿತು ಎನ್ನಲಾಗಿದೆ. ಆದ್ದರಿಂದ ಈ ಬಗ್ಗೆ ಮಾಹಿತಿ ಪಡೆದು ಮುಂದಿನ ಮಳೆಗಾಲದ ಒಳಗೆ ಇಂಗು ಗುಂಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಅರಣ್ಯ ಇಲಾಖೆ ವಿರುದ್ಧ ಶಾಸಕ ಕೆ ಜೆ ಬೋಪಯ್ಯ ಅಸಮಾಧಾನ..