ಕೊಡಗು:ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದೆ. ಕೊಡಗಿನಲ್ಲಿ ಗಂಡನ ವಿರುದ್ಧವೇ ಹೆಂಡತಿ ಸ್ಫರ್ಧೆಗಿಳಿಯುವ ಮೂಲಕ ಗಮನ ಸೆಳೆದಿದ್ದಾಳೆ. ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತಿಯಲ್ಲಿ ಇಂತಹ ಅಪರೂಪದ ಸ್ಪರ್ಧಾಳುಗಳು ಕಣದಲ್ಲಿದ್ದಾರೆ.
ಇದನ್ನೂ ಓದಿ : ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ: 141 ಸದಸ್ಯರು ಅವಿರೋಧ ಆಯ್ಕೆ
ಪಂಚಾಯತಿಯ 2ನೇ ವಾರ್ಡ್ ಆದ ಕಂಬಿಬಾಣೆಯಲ್ಲಿ ಕಿಶೋರ್ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಈ ಮೂಲಕ 22ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ-ಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ, ಮನೆಯಲ್ಲಿ ಅಷ್ಟೇ ನಾವು ಪತಿ-ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಜನರಿಗೆ ಯಾರು ಬೇಕಾಗಿದ್ದಾರೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.
ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇನ್ನು ಇದೇ ವಾರ್ಡ್ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಮಾತ್ರ ಯಾರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಾಗಿದೆ.