ಕರ್ನಾಟಕ

karnataka

ETV Bharat / state

ಡೊನೇಶನ್​ ವಿಷಯದಲ್ಲಿ ಕರುಣೆ ತೋರದ ಖಾಸಗಿ ಶಾಲೆಗಳು, ಪೋಷಕರಿಗೆ ವರವಾದ ಸರ್ಕಾರಿ ಶಾಲೆಗಳು

ಕೊರೊನಾ ಪರಿಣಾಮದಿಂದ ಜನ ಈಗಾಗಲೇ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳ ಡೊನೇಶನ್​ ಕಟ್ಟುವುದು ಕಷ್ಟಸಾಧ್ಯವಾಗಿದೆ. ಈ ಕಾರಣಕ್ಕೆ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಕೊಡಗಿನಲ್ಲಿ ಮಕ್ಕಳಿಲ್ಲದೇ ಮುಚ್ಚಿದ್ದ 3 ಶಾಲೆಗಳು ಮತ್ತೆ ಬಾಗಿಲು ತೆರೆದಿವೆ.

government school reopen in kodagu
ಸರ್ಕಾರಿ ಶಾಲೆ

By

Published : Sep 15, 2020, 7:10 PM IST

ಕೊಡಗು: ಸರ್ಕಾರಿ ಶಾಲೆಗಳೆಂದರೆ ಸಾಕು ಪೋಷಕರು ಮತ್ತು ವಿದ್ಯಾರ್ಥಿಗಳು ಮೂಗು ಮುರಿಯುತ್ತಿದ್ದರು. ಆದರೆ ಈಗ ಕೊರೊನಾ ಸಂಕಷ್ಟದಲ್ಲೂ ಖಾಸಗಿ ಶಾಲೆಗಳ ಡೊನೇಶನ್ ಹಾವಳಿಗೆ ಹೆದರಿ ಮತ್ತೆ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದ ಮೂರು ಸರ್ಕಾರಿ ಶಾಲೆಗಳು ಮತ್ತೆ ತೆರೆಯುತ್ತಿವೆ.

ಸರ್ಕಾರಿ ಶಾಲೆ

ಕೊರೊನಾ ಮಹಾಮಾರಿ ಇಡೀ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಆದರೆ ಕೋವಿಡ್​​ ಸರ್ಕಾರಿ ಶಾಲೆಗಳ ಪಾಲಿಗೆ ಒಂದು ರೀತಿ ವರದಾನವಾಗಿದೆ ಎಂದರೆ ತಪ್ಪಾಗಲಾರದು. ಕಾರಣ ಖಾಸಗಿ ಮತ್ತು ಇಂಗ್ಲಿಷ್​ ಮಾಧ್ಯಮ ಶಾಲೆಗಳ ವ್ಯಾಮೋಹದ ಪರಿಣಾಮವಾಗಿ ಮುಚ್ಚಿದ್ದ ಕೊಡಗಿನ ಸರ್ಕಾರಿ ಶಾಲೆಗಳು ಪುನರ್​​ ಆರಂಭವಾಗ್ತಿವೆ.

ಕೊರೊನಾ ತಂದಿಟ್ಟಿರುವ ಆರ್ಥಿಕ ಸಂಕಷ್ಟ ಪ್ರತೀ ವ್ಯಕ್ತಿಯ ದುಡಿಮೆಗೆ ಕತ್ತರಿ ಹಾಕಿದೆ. ಹೀಗಂತ ಖಾಸಗಿ ಶಾಲೆಗಳೇನು ಕರುಣೆ ತೋರಿಸಿ ಶಾಲಾ ಶುಲ್ಕವನ್ನ ಕಡಿಮೆ ಮಾಡಿಲ್ಲ. ಹೀಗಾಗಿ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ.

2018 ರಿಂದ ಕೊಡಗಿನ ಮಡಿಕೇರಿ ಮದೆನಾಡು, ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಹಾಗೂ ಕುಂದಾ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದವು.ಆದರೆ ಇದೀಗ ಖಾಸಗಿ ಶಾಲೆಗಳು ಭಾರಿ ಶುಲ್ಕ ಕಟ್ಟಲಾಗದ ಪೋಷಕರು, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಮುಚ್ಚಿದ್ದ ಶಾಲೆಗಳನ್ನು ತೆರೆಯುವಂತೆ ಪಂಚಾಯಿತಿ ಅಧಿಕಾರಿಗಳ ಮುಖಾಂತರ ಬಿಇಓ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮುಚ್ಚಿದ್ದ ಜಿಲ್ಲೆಯ ಸರ್ಕಾರಿ ಶಾಲೆಗಳು ಚೆನ್ನಾಗಿಯೇ ಇವೆ. ಆದರೆ ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಬೀಗ ಹಾಕಿದ್ದವು. ಇದೀಗ ಮೂರು ಶಾಲೆಗಳಿಗೂ ವಿದ್ಯಾರ್ಥಿಗಳನ್ನು ದಾಖಲಿಸಲು ಪೋಷಕರು ಬಂದಿರುವುದರಿಂದ ಆ ಶಾಲೆಗಳನ್ನು ಮತ್ತೆ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಕರು ಹಾಗೂ ಕೊಠಡಿಗಳ ಕೊರತೆ ಏನು ಇಲ್ಲ. ಯಾವೆಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯದ ಕೊರತೆ ಇದೆಯೋ ಅವುಗಳಿಗೆ ಸೌಲಭ್ಯ ಕಲ್ಪಿಸಿ, ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಶಿಕ್ಷಣ ಇಲಾಖೆ ಅಧಿಕಾರಿಗಳು ಒಲವು ತೋರಿಸುತ್ತಿದ್ದಾರೆ.

ಒಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಧನದಾಹಿ ಧೋರಣೆ ಸೃಷ್ಟಿಸಿರುವ ಆತಂಕದಿಂದ ವಿದ್ಯಾರ್ಥಿಗಳು, ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಎಲ್ಲೋ ಒಂದು ಕಡೆ ಅಳಿವಿನ ಅಂಚಿನತ್ತ ಸಾಗುತ್ತಿದ್ದ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಜೀವಕಳೆ ಬಂದಂತಾಗಿದೆ.

ABOUT THE AUTHOR

...view details