ಮಡಿಕೇರಿ (ಕೊಡಗು):ಕೇರಳದ ಮಾಜಿ ಯೋಧರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ 8 ಲಕ್ಷ ರೂಪಾಯಿ ನಗದು ಹಾಗು 2,00,000/- ಚೆಕ್ ಅನ್ನು ಪಡೆದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೊಡಗು ಪೊಲೀಸ್ ತಂಡ ಬಂಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ನಿವಾಸಿ ಅಬ್ದುಲ್ ಬಶೀರ್ (29) ಕಡಬದ ನಿವಾಸಿ ಸಾಧಿಕ್(30) ಮತ್ತೊಬ್ಬ ಆರೋಪಿ ಫೈಸುಲ್, ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾರೆ. ಬಂಧಿತ ಆರೋಪಿಗಳಿಂದ ಮೊಬೈಲ್, ನಗದು ಹಾಗೂ ಚೆಕ್ನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಅಮೀರ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ವಿವರ :ಕೇರಳದ ಎರ್ನಾಕುಳಂ ಜಿಲ್ಲೆಯ ನಿವಾಸಿ, 64 ವಯಸ್ಸಿನ ಮಾಜಿ ಯೋಧನಿಗೆ ಮದುವೆಯಾಗಲು ಒಬ್ಬ ಒಳ್ಳೆಯ ಹುಡುಗಿ ಇದ್ದಾಳೆ ಎಂದು ನಂಬಿಸಿ, ಅವರನ್ನು ನವೆಂಬರ್ 26ರಂದು ಮಡಿಕೇರಿಯ ಹೋಂ ಸ್ಟೇವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಹಿಳೆ ಒಬ್ಬಳನ್ನು ತೋರಿಸಿ, ಇವರನ್ನು ವಿವಾಹವಾಗುವಂತೆ ಹೇಳಿ, ಅದೇ ಹೋಂ ಸ್ಟೇನಲ್ಲಿ ಆರೋಪಿಗಳು ಮದುವೆ ಮಾಡಿಸಿದ್ದಾರೆ. ನಂತರ ಇಬ್ಬರನ್ನು ಹೋಂ ಸ್ಟೇಯಲ್ಲಿ ಅಂದು ತಂಗಲು ಅವಕಾಶ ನೀಡಿದ್ದರು.
ನಂತರ ಸಂಜೆ ಆರೋಪಿಗಳು ಇವರಿಬ್ಬರ ಜೊತೆಯಲ್ಲಿರುವ ಮದುವೆಯ ಫೋಟೋವನ್ನು ಮಾಜಿ ಯೋಧನಿಗೆ ತೋರಿಸಿ ಬ್ಲಾಕ್ ಮೇಲ್ ಮಾಡಿ, ಒಟ್ಟು ಎಂಟು ಲಕ್ಷ ನಗದು ಹಾಗೂ 2 ಲಕ್ಷ ರೂಪಾಯಿ ಚೆಕ್ನ್ನು ಪಡೆದು ಆರೋಪಿಗಳು ಪರಾರಿಯಾಗಿದ್ದರು. ನಂತರ ಸಂತ್ರಸ್ತ ಮಡಿಕೇರಿ ಪೊಲೀಸರಿಗೆ ದೂರನ್ನು ನೀಡಿದ್ದರು. ಇದರ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ, ಅವರಿಂದ ನಗದು, ಮೂರು ಮೊಬೈಲ್ ಹಾಗೂ ಚೆಕ್ನ್ನು ವಶಪಡಿಸಿಕೊಂಡಿದ್ದಾರೆ.
ಆರೂವರೆ ಕೋಟಿ ಕಳ್ಕೊಂಡ (ಪ್ರತ್ಯೇಕ ಘಟನೆ) : ಆಸ್ತಿಯ ಮೇಲೆ ಕಣ್ಣಿಟ್ಟು ವ್ಯಕ್ತಿಯೊಬ್ಬನನ್ನು ಮದುವೆಯಾದ ಯುವತಿಯೊಬ್ಬಳು ಆತನಿಂದ ಆರೂವರೆ ಕೋಟಿ ರೂಪಾಯಿ ದೋಚಿದ ಘಟನೆ ಹೈದರಾಬಾದ್ನಲ್ಲಿ (ಜೂನ್ 22-2022) ನಡೆದಿತ್ತು. ಪತ್ನಿ ಹಾಗೂ ದುಡ್ಡು ಎರಡನ್ನೂ ಕಳೆದುಕೊಂಡ ವ್ಯಕ್ತಿ ನಂತರ ಅಕ್ಷರಶಃ ಕಂಗಾಲಾಗಿದ್ದರು.
ಘಟನೆ ವಿವರ : ರವಿ ಕುಮಾರ ತಗರಂ ಹೆಸರಿನ ವ್ಯಕ್ತಿಯೊಬ್ಬರು ಮದುವೆ ಮಾಡಿಕೊಳ್ಳಲು ಕನ್ಯೆ ಹುಡುಕುತ್ತಿದ್ದರು. ಸೂಕ್ತ ವಧುವಿನ ಅನ್ವೇಷಣೆಗಾಗಿ ಅವರು ಮ್ಯಾಟ್ರಿಮೊನಿ ಏಜೆನ್ಸಿಯೊಂದಕ್ಕೆ ಹೋಗಿದ್ದರು. ಈ ಮ್ಯಾಟ್ರಿಮೊನಿ ಕಚೇರಿಯಲ್ಲಿ ಕೆಲಸ ಮಾಡುವ ರೀನಾ ಗೊರ್ಲೆ ಹೆಸರಿನ ಯುವತಿಯು ರವಿ ಕುಮಾರ ಅವರಿಗೆ ಪರಿಚಯವಾಗಿದ್ದರು. ಮದುವೆ ಮಾಡಿಕೊಳ್ಳುವ ಉದ್ದೇಶ ಇದ್ದುದರಿಂದ ಸಹಜವಾಗಿಯೇ ರವಿ ಕುಮಾರ ತಮ್ಮ ಸಾಕಷ್ಟು ವೈಯಕ್ತಿಕ ವಿವರಗಳನ್ನು ರೀನಾಳಿಗೆ ಹೇಳಿದ್ದರು. ರವಿ ಕುಮಾರ ಓರ್ವ ಶ್ರೀಮಂತ ವ್ಯಕ್ತಿಯಾಗಿರುವುದನ್ನು ಅರಿತ ರೀನಾ, ಆತನನ್ನು ಮದುವೆಯಾಗುವ ಪ್ಲಾನ್ ಮಾಡಿ ವಂಚಿಸಿದ್ದಳು.
ಇದನ್ನೂ ಓದಿ:'ಮ್ಯಾಟ್ರಿಮೊನಿ ಚೆಲುವೆ'ಯನ್ನು ಮದ್ವೆಯಾದ.. ಆರೂವರೆ ಕೋಟಿ ಕಳ್ಕೊಂಡ..!