ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್ನಲ್ಲಿ ಭಾರಿ ಅವ್ಯವಹಾರ ನಡೆದಿದೆ. ಸುಮಾರು 3,000ಕ್ಕೂ ಅಧಿಕ ಠೇವಣಿದಾರರಿಗೆ 7 ಕೋಟಿಗೂ ರೂ.ಗೂ ಅಧಿಕ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸೇನೆಯಿಂದ ನಿವೃತ್ತರಾಗಿ ಬಂದವರು, ಸರ್ಕಾರಿ ಕೆಲಸದಿಂದ ನಿವೃತ್ತರಾದವರು, ವಿಧವೆಯರು, ವೃದ್ಧರೂ ಸೇರಿದಂತೆ ಸಾವಿರಾರು ಮಂದಿ ತಮ್ಮ ದುಡಿಮೆಯ ಹಣವನ್ನು ಈ ಬ್ಯಾಂಕ್ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದಾರೆ. ಇವರೆಲ್ಲರಿಗೂ ಶೇಕಡ 10.5 ರಿಂದ ಶೇಡಕ 11 ರವೆರೆಗ ಬಡ್ಡಿ ನೀಡುವ ಆಮಿಷವೊಡ್ಡಲಾಗಿತ್ತು. ಆರಂಭದಲ್ಲಿ ಅಷ್ಟೇ ಪ್ರಮಾಣದ ಬಡ್ಡಿಯನ್ನೂ ನೀಡಿ ನಂಬಿಕೆ ಗಳಿಸಿದ್ದಾರೆ. ಹಾಗಾಗಿ ಜನರು ತಮ್ಮ ಸಂಪಾದನೆ ಹಣವನ್ನು ಬ್ಯಾಂಕ್ಗೆ ಸುರಿದಿದ್ದಾರೆ. ಆದ್ರೆ ನಮ್ಮ ಅರಿವಿಗೆ ಬರದಂತೆ ಬ್ಯಾಂಕ್ ಆಡಳಿತ ಮಂಡಳಿಯ ಕೆಲವರು ಒಳಗೊಳಗೆ ಗೋಲ್ಮಾಲ್ ಮಾಡಿ ಕೋಟಿ ಕೋಟಿ ಹಣ ನುಂಗಿದ್ದಾರೆ ಅಂತ ಗ್ರಾಹಕರು ಆರೋಪಿಸಿದ್ದಾರೆ.
ವಂಚನೆ:
ಈ ಅವ್ಯವಹಾರ ಕಳೆದೊಂದು ದಶಕದಿಂದಲೇ ನಡೆಯುತ್ತಿದೆ. ಆದ್ರೆ ಯಾರ ಗಮನಕ್ಕೂ ಬರದಂತೆ ಆಡಳಿತ ಮಂಡಳಿ ಎಚ್ಚರಿಕೆ ವಹಿಸಿತ್ತು. ಕಳೆದ ವರ್ಷ ಲಾಕ್ಡೌನ್ ಆದಾಗ ಒಮ್ಮೆಲೇ ಬ್ಯಾಂಕ್ನ ಪಿಗ್ಮಿ ಸಂಗ್ರಹ ನಿಂತು ಹೋಗುತ್ತದೆ. ಈ ಸಂದರ್ಭ ಠೇವಣಿದಾರರಿಗೆ ಬ್ಯಾಂಕ್ನಿಂದ ಬಡ್ಡಿ ಹಣ ಬರುವುದು ನಿಂತು ಹೋಗುತ್ತದೆ. ಏಕೆ ಬಡ್ಡಿ ಹಣ ನೀಡುತ್ತಿಲ್ಲ ಎಂದು ವಿಚಾರಿಸಿದಾಗ ಏನೇನೋ ಸಮಜಾಯಿಷಿ ನೀಡಿದ್ದಾರೆ. ಆಗ ಗ್ರಾಹಕರು ಠೇವಣಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ತಲೆ ತಪ್ಪಿಸಿಕೊಂಡು ಓಡಾಡಲು ಶುರುಮಾಡಿದ್ದಾರೆ. ಆಗ ಗ್ರಾಹಕರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.