ಮಡಿಕೇರಿ : ಸಚಿವ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಆರೋಪ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಸಮಾಜ ಸೇವಕ ಸಂಕೇತ್ ಪೂವಯ್ಯ ಅವರ ಪುತ್ರ ವಿವೇಕ್ ಪೂವಯ್ಯ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಈ ರೀತಿ ಮಾಡುವುದು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ನಡವಳಿಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಎರಡು ತರಹದ ಮುಖ ಹೊಂದಿದ್ದಾರೆ. ಎದುರು ಸಿಕ್ಕಾಗ ಒಂದು ರೀತಿ ಮಾತನಾಡಿಸುತ್ತಾರೆ. ಆದರೆ ಒಳಗೆ ಇರುವ ನಡವಳಿಕೆಯೇ ಬೇರೆ ಇದೆ ಎಂದು ಹೇಳಿದ್ದಾರೆ.
ಸಾರ್ವಜನಿಕರು ಅಹವಾಲು ಕೊಡಲು ಬಂದಾಗ ಅವರು ನಡೆದುಕೊಳ್ಳುವುದೆಲ್ಲಾ ಗೊತ್ತಿದೆ. ಅವರಿಂದ ಒಳ್ಳೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯ ಹಲವು ಸಚಿವರು ಹಿಂದೆ ಹೀಗೆ ನಡೆದುಕೊಂಡಿದ್ದು ಗೊತ್ತೇ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೇನಾಗಬೇಕು.. ಮಾಜಿ ಸಿಎಂ ಕುಮಾರಸ್ವಾಮಿ ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು: ಸಾತ್ಯಕಿ ಸಾವರ್ಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೇನಾಗಬೇಕು. ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಅವರ ಉಪದೇಶ ಕಟ್ಟಿಕೊಂಡು ನನಗೆ ಏನೂ ಆಗಬೇಕಿಲ್ಲ ಎಂದು ತಿರುಗೇಟು ನೀಡಿದರು.
ಮೊದಲು ಜನರ ಬದುಕನ್ನು ಕಟ್ಟಲು ನೋಡಿ. ಕೊಡಗಿನಲ್ಲಿ ಸತತ ಮೂರು ವರ್ಷಗಳಿಂದ ಭೂಕುಸಿತದಿಂದ ಮನೆ, ಬೆಳೆ ಹಾಳಾಗಿವೆ. ಅವರಿಗೆ ಏನು ಕೊಟ್ಟಿದ್ದೀರಿ. ಮೊದಲು ಹೇಳಿ. ಆಮೇಲೆ ನಿಮ್ಮ ಹಿಂದಿ ಭಾಷೆ ಬಗ್ಗೆ ಚರ್ಚೆ ಮಾಡಿ. ಸಾವರ್ಕರ್ ಮಗನೋ, ಮೊಮ್ಮಗನೋ ಇಲ್ಲಿಗೆ ಬಂದು ನಮಗೆ ಬೋಧನೆ ಮಾಡುವುದು ಏನಿದೆ. ಮೊದಲು ಜನರ ಬದುಕನ್ನು ಕಟ್ಟಲು ಮುಂದಾಗಿ ಎಂದು ಕುಮಾರಸ್ವಾಮಿ ಗುಡುಗಿದರು.
ಆನಂದ್ ಮಾಮನಿ ನಿಧನಕ್ಕೆ ಹೆಚ್‌ಡಿಕೆ ಸಂತಾಪ: ಇದೇ ಸಂದರ್ಭದಲ್ಲಿ ವಿಧಾನಸಭಾ ಉಪ ಸಭಾಪತಿ ಆನಂದ್ ಮಾಮನಿ ನಿಧನಕ್ಕೆ ಹೆಚ್‌ಡಿಕೆ ಸಂತಾಪ ಸೂಚಿಸಿದ್ದಾರೆ. ಆನಂದ್ ಮಾಮನಿ ಅವರು ಸರಳ ಸಜ್ಜನಿಕೆ, ಸೌಮ್ಯ ವ್ಯಕ್ತಿ, ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಸಾವು ಬರಬಾರದಿತ್ತು. ಅವರು ಬಿಜೆಪಿ ಸೇರುವುದಕ್ಕೆ ಮುನ್ನ ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದರು. ಅವರ ತಂದೆ ನಮ್ಮ ಪಕ್ಷದ ವತಿಯಿಂದ 1997-98ರಲ್ಲಿ ವಿಧಾನಸಭೆ ಸಭಾಪತಿ ಆಗಿದ್ದರು. ದೇವರು ಅವರ ಕುಟುಂಬಕ್ಕೆ ನೋವನ್ನು ತಡೆಯುವ ಶಕ್ತಿ ನೀಡಲಿ ಎಂದರು.
ಇದನ್ನೂ ಓದಿ :5 ನಿಮಿಷದ ಕಿರು ಚಿತ್ರಕ್ಕೆ ಬರೋಬ್ಬರಿ 4.50 ಕೋಟಿ ರೂಪಾಯಿ.. ಒಪ್ಪಂದ ವಜಾಕ್ಕೆ ಸಚಿವ ನಿರಾಣಿ ಸೂಚನೆ