ಕೊಡಗು : ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಕಂಡಂಗಾಲ ಗ್ರಾಮದ ಬಳಿ 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಇಂದು (ಭಾನುವಾರ) ಸೆರೆ ಹಿಡಿದಿದ್ದಾರೆ. ಕಾಡಾನೆಯನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಡಿ. ಬಿ ಕುಪ್ಪೆ ಅರಣ್ಯ ವಲಯಕ್ಕೆ ಬಿಡಲು ಅರಣ್ಯ ಇಲಾಖೆ ನಿರ್ಧಾರಿಸಿದೆ.
ಒಂದೇ ತಿಂಗಳಲ್ಲಿ ಬೇರೆ ಬೇರೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಂದಿ ಕಾರ್ಮಿಕರ ಮೇಲೆ ದಾಳಿ ಮಾಡಿತ್ತು. ಇದರಿಂದ ಸುತ್ತಲಿನ ಸ್ಥಳೀಯರು ಭಯದಲ್ಲಿ ಜೀವನ ಮಾಡುವಂತಾಗಿತ್ತು. ಇದೀಗ ಕಾಡಾನೆ ಸೆರೆಯಿಂದ ಸ್ಥಳೀಯರಲ್ಲಿ ಆತಂಕ ದೂರವಾಗಿದೆ. ದುಬಾರೆ ಸಾಕಾನೆ ಶಿಬಿರದಿಂದ 3 ಆನೆ ಮತ್ತು ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಸಹಕಾರದೊಂದಿಗೆ ಸತತ ಎರಡು ದಿನಗಳ ಕಾಲ ಕಾವಡಿಗರು, ಮಾವುತರು ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾ ಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ವಿರಾಜಪೇಟೆ ಉಪ ಅರಣ್ಯಾಧಿಕಾರಿ ಬಿ.ಎಂ ಚನ್ನಬಸಪ್ಪ ಅವರು ಮಾತನಾಡಿ, ಕಳೆದ 2 ತಿಂಗಳಿನಿಂದ ಆನೆ ದಾಳಿ ಇಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಸರ್ಕಾರದಿಂದ 2 ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಆದೇಶ ಬಂದಿತ್ತು. ಆದರಂತೆ ನಮ್ಮ ಅರಣ್ಯಾಧಿಕಾರಗಳ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡು ಅಭಿಮನ್ಯು, ಪ್ರಶಾಂತ, ಹರ್ಷ ಸೇರಿದಂತೆ 4 ಸಾಕಾನೆಗಳ ನೆರವಿನಿಂದ 2 ಗಂಟೆ ಸಮಯದಲ್ಲಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. ಹಾಗು ನಮ್ಮ ಮೇಲಾಧಿಕಾರಿಗಳ ನಿರ್ದೇಶನದಂತೆ ರೇಡಿಯೋ ಕಾಲರ್ ಆಳವಡಿಸಿ ಡಿ.ಬಿ ಕುಪ್ಪೆ ಅರಣ್ಯ ವಲಯಕ್ಕೆ ಬಿಡಲಾಗವುದು ಎಂದು ತಿಳಿಸಿದರು.