ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಪುಪ್ಪಪ್ರಿಯರನ್ನು ಆಕರ್ಷಣೆ ಮಾಡುವ ಫಲಪುಪ್ಪ ಪ್ರದರ್ಶನ ಏರ್ಪಡಿಸಲಾಗಿದೆ. 4 ದಿನಗಳ ನಡೆಯುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ. ಬಣ್ಣ ಬಣ್ಣದ ಹೂಗಳಿಂದ ನಿರ್ಮಾಣವಾದ ಕಲಾಕೃತಿ ಮತ್ತು ನೂರರ ಬಗೆಯ ಹೂಗಳು ಪುಪ್ಪಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯಿಂದ ಫೆ.6 ರವರೆಗೆ ನಗರದ ರಾಜಾಸೀಟು ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಈ ಬಾರಿ ಆರ್ಷಣೆಯಾಗಿ ಹೂವಿನಿಂದ ತಯಾರಾದ ರಾಜರ ಅರಮನೆ ನಿರ್ಮಾಣ ಮಾಡಲಾಗಿದೆ. ಪುಷ್ಪಗಳಿಂದ ನಿರ್ಮಾಣವಾಗಿರುವ ಕಲಾಕೃತಿಗಳು ಆಕರ್ಷಿಸುತ್ತಿವೆ. ನಾಲ್ಕುನಾಡು ಅರಮನೆ ಕಲಾಕೃತಿಯ ಚಿತ್ರದಲ್ಲಿ ರಾಜರು ಕುಳಿತಿರುವುದು, ಹಾಗೆಯೇ ಕೊಡವ ಉಡುಪಿನಲ್ಲಿ ಸ್ವಾಗತಿಸುವ ಚಿತ್ರಗಳು, ಸಿಂಡ್ರೆಲಾ, ವೈನ್‍ಕಪ್ ಒಳಗೊಂಡ ಚಿತ್ರಗಳು, ಹೆಸರು ಕಾಳು ಮತ್ತು ಬಿಳಿ ಎಳ್ಳು ಮೂಲಕ ಸೃಜನಶೀಲವಾಗಿ ನಿರ್ಮಾಣ ಮಾಡಿರುವ ಸೈನಿಕನ, ಅನೇಕ ಕಲಾಕೃತಿಗಳು ರಾಜಾಸೀಟು ಉದ್ಯಾನದಲ್ಲಿ ಮೂಡಿಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್, ಅಂಬೇಡ್ಕರ್, ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಕವಿ ಕುವೆಂಪು, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರಬೋಸ್, ಭಗತ್‍ಸಿಂಗ್, ಪುನಿತ್ ರಾಜ್‍ಕುಮಾರ್ ಸೇರಿದಂತೆ ವಿವಿಧ ಗಣ್ಯರ ಕಲಾಕೃತಿಯನ್ನು ವಿವಿಧ ತರಕಾರಿ ಮತ್ತು ಹಣ್ಣುಗಳಲ್ಲಿ ಕೆತ್ತನೆ ಮಾಡಲಾಗಿದೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸ್‍ಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಹಾಗೂ ಅಂಥೋರಿಯಂ ಹೂವಿನ ಪ್ರದರ್ಶನ ಗಮನ ಸೆಳೆಯುತ್ತಿದೆ. ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಕಲಾಕೃತಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿವೆ.
ಈ ಫಲಪುಷ್ಪ ಪ್ರದರ್ಶನಕ್ಕೆ 10 ಸಾವಿರದಿಂದ 12 ಸಾವಿರ ಸಂಖ್ಯೆಯ ಹದಿನೈದರಿಂದ ಇಪ್ಪತ್ತು ಜಾತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ನಾಟಿ ಮಾಡಲಾಗಿದೆ.