ಕೊಡಗು: ಕಳೆದ ಎರಡು ವರ್ಷಗಳಿಂದಲೂ ಕೊಡಗು ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ತತ್ತರಿಸಿ ಹೋಗಿದೆ. ಒಂದು ವರ್ಷ ಭೀಕರ ಭೂ ಕುಸಿತವಾಗಿದ್ದರೆ, 2019ರಲ್ಲಿ ದೊಡ್ಡ ಪ್ರವಾಹ ಸೃಷ್ಟಿಯಾಗಿ ಸಾವಿರಾರು ಜನರು ಮನೆ ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ್ದ ದುರಂತಗಳು ಈ ಬಾರಿಯೂ ಕೊಡಗಿಗೆ ಎದುರಾಗುತ್ತಾ ಎಂಬ ಅನುಮಾನ ಜಿಲ್ಲಾಡಳಿತ ಮಾಡಿಕೊಳ್ಳುತ್ತಿರುವ ಸಿದ್ಧತೆಗಳಿಂದ ಮೂಡುತ್ತದೆ.
ಈಗಾಗಲೇ ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿದ್ದು, ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೂ ಕಾಲಿಡಲಿದೆ. 2018ರಲ್ಲಿ ಮಡಿಕೇರಿ ತಾಲೂಕಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದರೆ, 2019ರಲ್ಲಿ ಮೂರು ತಾಲೂಕುಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲದೆ ವಿರಾಜಪೇಟೆ ತಾಲೂಕಿನಲ್ಲಿ ಭೂ ಕುಸಿತವೂ ಸಂಭವಿಸಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಹೀಗಾಗಿಯೇ ಈ ಬಾರಿ ಜಿಲ್ಲಾಡಳಿತ ಮೂರು ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಮತ್ತೊಂದೆಡೆ ಹವಾಮಾನ ಇಲಾಖೆ ಈ ಬಾರಿಯೂ ಪ್ರವಾಹ ಸೃಷ್ಟಿಯಾಗುತ್ತೆ ಎನ್ನುವ ಮುನ್ಸೂಚನೆ ನೀಡಿದೆ. ಜ್ಯೋತಿಷಿಯೊಬ್ಬರು ಕೊಡಗಿನಲ್ಲಿ ಭೂಕಂಪವಾಗಿ, ಇಡೀ ಜಿಲ್ಲೆ ನೆಲಸಮ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಕೊಡಗಿನ ಬೆಳೆಗಾರರ ಸಂಘ, ಆ ಜೋತಿಷಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮತ್ತೊಂದೆಡೆ ಮಡಿಕೇರಿ ವಿಜಯ ವಿನಾಯಕ ದೇವಾಲಯದ ಅರ್ಚಕರು/ ಜ್ಯೋತಿಷಿಯೂ ಆಗಿರುವ ಕೃಷ್ಣ ಭಟ್ ಅವರು, ಕೊಡಗಿನಲ್ಲಿ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಮಳೆಯಿಂದ ಅವಾಂತರ, ಅವಘಡಗಳು ಸಂಭವಿಸುತ್ತವೆ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದ ಎರಡು ವರ್ಷಗಳು ಮಳೆಯಿಂದ ಆದ ದುರಂತಗಳನ್ನು ಜಿಲ್ಲಾಡಳಿತ ಎದುರಿಸಿದ ಅನುಭವವಿದೆ. ಎನ್ಡಿಆರ್ಎಫ್ ತಂಡ ಸದ್ಯದಲ್ಲೇ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದೆ. ಮತ್ತೊಂದೆಡೆ ಜಿಲ್ಲಾಡಳಿತ ಕೂಡ ಅಗ್ನಿ ಶಾಮಕ ತಂಡ, ಡಿಆರ್ ಪೊಲೀಸ್, ಹೋಮ್ ಗಾರ್ಡ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತರಬೇತಿ ನೀಡಿದೆ. ಕೊಡಗಿನ ಹಾರಂಗಿ ಜಲಾಶಯ, ಕೂಟು ಹೊಳೆಗಳಲ್ಲಿ ಬೋಟ್‍ಗಳ ಮೂಲಕ ತಾಲೀಮು ನಡೆಸಿದೆ.
ಅಷ್ಟೇ ಅಲ್ಲದೆ ಪ್ರಾಕೃತಿಕ ವಿಕೋಪ ಎದುಸಿರುವುದಕ್ಕಾಗಿ ಮೂರು ತಾಲೂಕುಗಳ ತಹಶೀಲ್ದಾರ್‌ಗಳ ಖಾತೆಗೆ ತಲಾ 1 ಕೋಟಿ ರೂ. ಹಾಕಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ- 50,000 ರೂ, ಪಟ್ಟಣ ಪಂಚಾಯಿತಿ- 1 ಲಕ್ಷ ರೂ. ಮತ್ತು ನಗರ ಸಭೆಗೆ 2 ಲಕ್ಷ ರೂ. ನೀಡಲಾಗಿದೆ. ಈ ಎಲ್ಲಾ ಸಿದ್ಧತೆಗಳನ್ನು ನೋಡಿದರೇ ಕೊಡಗಿಗೆ ಮತ್ತೆ ಪ್ರವಾಹ ಎದುರಾಗುತ್ತಾ? ಪ್ರಾಕೃತಿಕ ವಿಕೋಪ ಉಂಟಾಗುತ್ತಾ ಎಂಬ ಪ್ರಶ್ನೆಗಳು ಜಿಲ್ಲಾಡಳಿತ ನಡೆಸುತ್ತಿರುವ ಸಿದ್ಧತೆಗಳನ್ನು ನೋಡಿದರೆ ಮೂಡುತ್ತವೆ.