ಕೊಡಗು :ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈಗಾಗಲೇ ನದಿ ಪಾತ್ರದ ಜನರಿಗೆ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸದೇ ನೋಟಿಸ್ ನೀಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಬರಡಿ ಮತ್ತು ಕುಂಬಾರಗುಂಡಿ ಗ್ರಾಮಗಳ ಜನರ ಬದುಕು ಶೋಚನೀಯವಾಗಿದೆ. 2019ರಲ್ಲಿ ಸುರಿದ ಭಾರೀ ಮಳೆಗೆ ಕಂಡು ಕೇಳರಿಯದಂತಹ ಪ್ರವಾಹ ಎದುರಾಗಿತ್ತು. ನೂರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದವು. ಬಳಿಕ ಸಂತ್ರಸ್ತರ ನಿರಂತರ ಹೋರಾಟದ ಫಲವಾಗಿ ಕೊನೆಗೂ ಜಿಲ್ಲಾಡಳಿತ ಮಡಿಕೇರಿ ತಾಲೂಕಿನ ಅಭ್ಯತ್ ಮಂಗಲ ಬಳಿ ನಿರಾಶ್ರಿತರಿಗೆ ಜಾಗಗಳನ್ನು ಗುರುತಿಸಿ ನಿವೇಶನ ಹಂಚಲು ಮುಂದಾಗಿತ್ತು. ಆದರೆ, ಇಂದಿಗೂ ನಿವೇಶನ ವಿತರಣೆ ಮಾಡಿಲ್ಲ.