ಕೊಡಗು : ಜಿಲ್ಲೆಯಲ್ಲಿ 2019 ರಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ವಾಸದ ಮನೆ ಕಳೆದುಕೊಂಡು ನೂತನ ಸೂರಿಗಾಗಿ ಗೋಳಾಡಿ ಸಾಕಾದ ಸಂತ್ರಸ್ತೆಯೊಬ್ಬರು ಇದೀಗ ರಾಷ್ಟ್ರಪತಿಯವರಿಗೆ ಪತ್ರ ಬರೆಯುವ ಮೂಲಕ "ನನಗೆ ಮನೆ ಕೊಡಿ, ಇಲ್ಲವೇ ಸಾಯಲು ಅನುಮತಿ ನೀಡಿ" ಎಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಲ್ಲಿಹುದಿಕೇರಿ ಗ್ರಾಮದ ಶಾಂತಾ ಎಂಬುವರು ಜಲಪ್ರಳಯದಲ್ಲಿ ಮನೆ ಕಳೆದುಕೊಂಡು ನಾಲ್ಕು ವರ್ಷಗಳಾದರೂ ಪುನರ್ವಸತಿ ಪಡೆಯಲಾಗದೇ ಇನ್ನೂ ಪರದಾಡುತ್ತಿದ್ದಾರೆ. ಹೀಗಾಗಿ, ನಮಗೆ ಮನೆ ಕಟ್ಟಿಸಿ ಕೊಡಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ :ಅನ್ವರ್ ಹತ್ಯೆ ಪ್ರಕರಣ : ಹಂತಕರನ್ನು ಬಂಧಿಸಿ, ಇಲ್ಲವೇ ದಯಾಮರಣ ಕೊಡಿ ಎಂದ ಕುಟುಂಬಸ್ಥರು
''ನಾನು ಕಾವೇರಿ ನದಿ ತೀರದ ಬಳಿಯ ನಲ್ಲಿಹುದಿಕೇರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಮಗನೊಂದಿಗೆ ವಾಸವಿದ್ದು, ಕೂಲಿ ಮತ್ತು ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. ಆದರೆ, 2019 ರಲ್ಲಿ ಸಂಭವಿಸಿದ ಜಲ ಪ್ರಳಯದಲ್ಲಿ ಮನೆ ಸಂಪೂರ್ಣ ನೆಲಕಚ್ಚಿತ್ತು. ರಾತ್ರೋರಾತ್ರಿ ಮಳೆ ಹೆಚ್ಚಾದ ಪರಿಣಾಮ ವಿಪರೀತ ಗಾಳಿಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿತ್ತು. ಪ್ರಾಣ ಉಳಿಸಿಕೊಳ್ಳಲು ನಾನು ನನ್ನ ಮಗನ ಜೊತೆ ಮನೆಯಿಂದ ಆಶ್ರಯ ಶಿಬಿರಕ್ಕೆ ಬಂದೆವು. ಆದರೆ, ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಆದರೆ, ಕಾಳಜಿ ಕೇಂದ್ರದಲ್ಲಿ ವಾಸಮಾಡಿಕೊಂಡು ಬಾಡಿಗೆ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದೆ. ಈಗ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಜೀವನ ನಡೆಸಲು ಕಷ್ಟವಾಗಿದ್ದು ಮನೆ ಕೊಡುವಂತೆ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿ ಅಲೆದಾಡಿದ್ದೇನೆ. ಆದರೂ, ಯಾವುದೇ ಪ್ರಯೋಜವಾಗಿಲ್ಲ" ಎಂದು ಶಾಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.