ಕೊಡಗು:ಇತ್ತೀಚೆಗಷ್ಟೇ ಸುರಿದ ಮಹಾ ಮಳೆಗೆ ಕಾವೇರಿನದಿಪ್ರವಾಹದ ರೀತಿ ಉಕ್ಕಿ ಹರಿದಿದ್ದು, ಇದರಿಂದಾಗಿ ಹಲವರು ತಮ್ಮ ಮೂಲ ನೆಲೆಗಳನ್ನ ಕಳೆದುಕೊಂಡಿದ್ರೆ, ಇತ್ತ ಮರಳು ಮಾಫಿಯಾವೂ ಇಷ್ಟೆಲ್ಲಾ ಅವಾಂತರಕ್ಕೆ ನೇರ ಕಾರಣ ಎನ್ನುವ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ-ಬೆಟ್ಟದಕಾಡು ಗ್ರಾಮಗಳ ಜನತೆ ಪ್ರತಿವರ್ಷ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಒಂದೊತ್ತಿನ ಊಟಕ್ಕೂ ಕೂಲಿಯನ್ನೇ ನಂಬಿ ಬದುಕಿದ್ದಾರೆ.ಇತ್ತೀಚೆಗೆ ಮಳೆ ತಂದ ಅವಾಂತರದಿಂದ ಅವರ ಬದುಕು ಮೂರಾಬಟ್ಟೆಯಾನ್ನಾಗಿಸಿತ್ತು. ಬಹುತೇಕ ಮನೆಗಳೆಲ್ಲ ನೆಲಸಮವಾಗಿದ್ದು, ಇಂದಿಗೂ ಊರು ತೊರೆದು ನಿರಾಶ್ರಿತ ಕೇಂದ್ರಗಳಲ್ಲೇ ಇದ್ದಾರೆ.
ನದಿ ಪಾತ್ರದ ನಿರಾಶ್ರಿತರಿಗೆ ಮರಳು ಮಾಫಿಯಾ ಕಂಟಕ? ಬಹಳ ಹಿಂದೆಯೇ ನದಿ ಪಾತ್ರದಲ್ಲೇ ನೆಲೆ ಕಂಡು ಕೊಂಡಿದ್ದೇವೆ. ನಾವೇನು ನದಿ ಪಕ್ಕಕ್ಕೇ ಹೋಗಿ ಮನೆಗಳನ್ನು ಕಟ್ಟಿಕೊಂಡಿರಲಿಲ್ಲ. ಪ್ರತಿವರ್ಷವೂ ನದಿ ನೀರು ಬರುತ್ತಿತ್ತು. ಆದರೆ, ಎರಡು ವರ್ಷಗಳಿಂದ ಪ್ರವಾಹದ ರೀತಿಯಲ್ಲಿ ನೀರು ಬರುತ್ತಿದೆ. ಇದಕ್ಕೆ ಕಾರಣ ಕೆಲವರು ನೀರು ಕಡಿಮೆ ಯಾದ ಮೇಲೆ ನದಿ ದಂಡೆಯಲ್ಲಿನ ಮರಳನ್ನು ಅಕ್ರಮವಾಗಿ ತೆಗೆಯುತ್ತಿರುವುದೇ ಕಾರಣ. ಅವರಿಗೆಲ್ಲಾ ಕೆಲವು ಅಧಿಕಾರಿಗಳೂ ಕೂಡ ಸಹಾಯ ಮಾಡುತ್ತಿದ್ದಾರೆ. ಇದನ್ನು ನಾವು ಪ್ರಶ್ನಿಸುವಂತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಇಲ್ಲಿನ ಸ್ಥಳೀಯರು.
ನದಿಯಲ್ಲಿ ತುಂಬಿರುವ ಮರಳನ್ನು ತೆಗೆಯದಿದ್ದರೆ ನೀರು ಸರಾಗವಾಗಿ ಹರಿದು ಪ್ರವಾಹ ಸೃಷ್ಟಿಸುವುದಿಲ್ಲ. ಆದರೆ, ಮರಳಿನ ವ್ಯಾಮೋಹಕ್ಕೆ ಮಾಫಿಯಾದವರು ವ್ಯಾಪ್ತಿ ಮೀರಿ ತೆಗೆದಿರುವುದು ಕಂಡುಬರುತ್ತದೆ. ಗ್ರಾಮದ ಮನೆಗಳ ಗೋಡೆಗಳಿಗೂ ನದಿ ದಂಡೆಗೂ ಕೇವಲ ಮಾರು ದೂರವಷ್ಟೇ ಉಳಿದಿದ್ದು ಮನೆಗಳು ಶಿಥಿಲಾವಸ್ಥೆ ತಲುಪಿವೆ. ಇದರಿಂದಾಗಿ ಸ್ಥಳೀಯರು ಜೀವ ಭಯದಿಂದ ಬದುಕುತ್ತಿದ್ದಾರೆ.