ಕೊಡಗು:ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದ್ದರೂ ಅದನ್ನು ಪಾಲಿಸದವರಿಗೆ ಪೊಲೀಸರು ಬುದ್ಧಿವಾದ ಹೇಳಿ ದಂಡ ವಿಧಿಸುತ್ತಿದ್ದಾರೆ.
ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಪೊಲೀಸರು ಮಾಸ್ಕ್ ಧರಿಸದೆ ಬೈಕ್, ಕಾರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ತಿಳಿಹೇಳಿ ದಂಡ ವಿಧಿಸಲು ಮುಂದಾದರು.
ಇಂದಿನಿಂದ ಸರ್ಕಾರ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹೇಳಿದೆ. ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿರುವುದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ ಗ್ರಾಮೀಣ ಭಾಗದಲ್ಲಿ 500 ರೂ. ಹಾಗೆಯೇ ನಗರ ಪ್ರದೇಶಗಳಲ್ಲಿ 1000 ರೂ. ದಂಡ ವಿಧಿಸಬಹುದು ಎಂದು ತಿಳಿಹೇಳುತ್ತಿದ್ದಾರೆ.
ಕೆಲವರು ಪೊಲೀಸರನ್ನು ಕಂಡ ತಕ್ಷಣ ಮಾಸ್ಕ್ ತಡಕಾಡಿ ಧರಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಬೆರಣಿಕೆಯಷ್ಟು ಜನರನ್ನು ಹೊರತುಪಡಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳಲ್ಲಿ ಬಹುತೇಕರು ಮಾಸ್ಕ್ ಧರಿಸದೆ ಇದ್ದ ಚಿತ್ರಣಗಳು ಕಂಡು ಬಂದವು.