ಸೋಮವಾರಪೇಟೆ/ಕೊಡಗು: ಕೊರೊನಾ ಮಹಾಮಾರಿ ನಿಯಂತ್ರಿಸಲು ದೇಶವೇ ಲಾಕ್ ಡೌನ್ ಆಗಿದೆ. ಇದರಿಂದಾಗಿ ಬಡವರು, ರೈತರು ಮಧ್ಯಮ ವರ್ಗದ ಜನರು ಸೇರಿದಂತೆ ಎಲ್ಲಾ ಜನರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜನರು ಯಾವುದೇ ಸಾಲ ಮರುಪಾವತಿಯನ್ನು ಇನ್ನೂ ಮೂರು ತಿಂಗಳು ಮಾಡಬೇಕಾದ ಅಗತ್ಯವಿಲ್ಲವೆಂದು ಸರ್ಕಾರಗಳು ಹೇಳಿವೆ.
ಆದರೆ ಲಾಕ್ ಡೌನ್ ನಡುವೆಯೂ ಕೆಲವು ಫೈನಾನ್ಸ್ ಕಂಪನಿಗಳು ಜನರಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿವೆ. ಮನೆ ಮನೆಗೆ ಹೋಗಿ ಸಾಲದ ಹಣ ಪಾವತಿಸುವಂತೆ ಕಿರುಕುಳ ನೀಡುತ್ತಿವೆ ಎಂಬ ಆರೋಪಗಳು ಸೋಮವಾರಪೇಟೆ ತಾಲೂಕಿನ ಬಳ್ಳಾರಳ್ಳಿಯಲ್ಲಿ ಕೇಳಿಬಂದಿವೆ.
ಲಾಡ್ಡೌನ್ ನಡುವೆಯೂ ಸಾಲ ವಸೂಲಿಗೆ ಮುಂದಾದವಾ ಫೈನಾನ್ಸ್ ಕಂಪನಿಗಳು? ಈ ಗ್ರಾಮದಲ್ಲಿ ಎಸ್ ಕೆಎಸ್ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದಾರೆ. ಆದರೆ ಈ ಸಾಲದ ಹಣವನ್ನು ಮರುಪಾವತಿಸುವಂತೆ ಬೆಳಗ್ಗೆ ಗ್ರಾಮಕ್ಕೆ ಹೋಗಿ ಮಹಿಳೆಯರನ್ನು ಒಂದೆಡೆ ಸೇರಿಸಿ ಒತ್ತಾಯಿಸಿದ್ದಾರೆ. ಅದರಲ್ಲೂ ಸಂಘದ ಅಧ್ಯಕ್ಷರಿಗೆ ಪುನಃ ಸಾಲ ನೀಡುವುದಾಗಿ ಆಮಿಷವೊಡ್ಡಿ, ಉಳಿದ ಮಹಿಳಾ ಸದಸ್ಯರಿಂದ ಸಾಲ ವಸೂಲಿ ಮಾಡುವಂತೆ ಕಿರುಕುಳ ನೀಡಿದ್ದಾರೆ ಎನ್ನಲಾಗ್ತಿದೆ.
ವಿಷಯ ಗೊತ್ತಾದ ಕೂಡಲೇ ಕರ್ನಾಟಕ ರಕ್ಷಣ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಾನ್ಸಿಸ್ ಡಿಸೋಜಾ ಮತ್ತು ಕಾರ್ಯಕರ್ತರು ಸ್ಥಳಕ್ಕೆ ಹೋಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಂತೆ ಫೈನಾನ್ಸ್ ಕಂಪನಿ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅಲ್ಲದೆ, ಈ ರೀತಿ ಲಾಕ್ ಡೌನ್ ಸಮಸ್ಯೆ ನಡುವೆಯೂ ಸಾಲದ ಹಣವನ್ನು ಮರು ಪಾವತಿಸುವಂತೆ ಜನರಿಗೆ ಕಿರುಕುಳ ನೀಡುತ್ತಿರುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.