ಕೊಡಗು :ಇಂದು ಭಾರತೀಯ ಸೇನಾ ಇತಿಹಾಸದ ಮಹಾ ದಂಡನಾಯಕ, ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 123ನೇ ಜನ್ಮ ದಿನಾಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು.
ಮಡಿಕೇರಿ ನಗರದ ಚೆಟ್ಟಲ್ಲಿ ರಸ್ತೆಯಲ್ಲಿರುವ ಕೆ.ಎಂ ಕಾರ್ಯಪ್ಪರವರ ರೋಷನಾರ ನಿವಾಸದ ಬಳಿಯಿರುವ ಅವರ ಸಮಾಧಿಗೆ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಕುಟುಂಬಸ್ಥರು, ನಿವೃತ್ತ ಯೋಧರು ಹಾಗೂ ಶಾಲಾ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.
ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪರ 123ನೇ ಜನ್ಮದಿನ ಆಚರಣೆ ನನ್ನ ತಂದೆ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದ್ದಾರೆ. ಎಲ್ಲಾ ಜಾತಿ, ಧರ್ಮದವರನ್ನು ಸಮಾನತೆಯಿಂದ ಕಾಣಬೇಕೆಂಬ ಪಾಠವನ್ನು ಹೇಳಿಕೊಟ್ಟಿದ್ದಾರೆ. ಆದರೀಗ ದೇಶದಲ್ಲಿ ಧರ್ಮದ ವಿಷಯಕ್ಕೆ ಒಡಕು ಮೂಡುತ್ತಿರುವುದು ವಿಷಾದಕರ.
ಇಂದಿನ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವಂತಾಗಬೇಕು ಎಂದು ಕಾರ್ಯಪ್ಪನವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಹೇಳಿದರು.
ಜಿಲ್ಲಾಡಳಿತದಿಂದ ನಮನ :ಕೊಡಗು ಜಿಲ್ಲಾಡಳಿತದ ವತಿಯಿಂದಲೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಜನ್ಮದಿನವನ್ನು ಆಚರಿಸಲಾಯಿತು. ಮಡಿಕೇರಿಯ ಸುದರ್ಶನ ಸರ್ಕಲ್ ಬಳಿಯಿರುವ ಕಾರ್ಯಪ್ಪನವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾಧಿಕಾರಿ ಬಿ.ಸಿ ಸತೀಶ್, ಶಾಸಕ ಕೆ.ಜಿ ಬೊಪ್ಯಯ್ಯ, ಅಪ್ಪಚ್ಚು ರಂಜನ್,ಎಂಎಲ್‌ಸಿ ವೀಣಾ ಆಚಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ದರು.
ರೈತ ಕುಟುಂಬದಿಂದ ಬಂದ ಕಾರ್ಯಪ್ಪ :ರೈತ ಕುಟುಂಬದಲ್ಲಿ 1899ರ ಜನವರಿ 28ರಂದು ಜನಿಸಿದ ಕಾರ್ಯಪ್ಪನವರು, 1919ರಲ್ಲಿ ಭಾರತೀಯ ಸೇನೆಗೆ ಜೂನಿಯರ್ ಅಧಿಕಾರಿಯಾಗಿ ಸೇರ್ಪಡೆಗೊಂಡರು. 1927ರಲ್ಲಿ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದರು. ಬಳಿಕ ಡೆಪ್ಯೂಟಿ ಚೀಫ್ ಆಫ್ ಜನರಲ್ ಸ್ಟಾಫ್ ಆಗಿ ನೇಮಕಗೊಂಡರು. 1947ರಲ್ಲಿ ಫೀಲ್ಡ್ ಮಾರ್ಷಲ್ ಆದರು.
ಕಾರ್ಯಪ್ಪನವರು ಇಂಗ್ಲೆಂಡಿನ ಕ್ಯಾಂಬರ್ಲಿಯ ಇಂಪೀರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ತರಬೇತಿ ಕೋರ್ಸ್ಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಸ್ವಾತಂತ್ರ್ಯದ ನಂತರ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರನ್ನು ಮೇಜರ್ ಜನರಲ್ ಹುದ್ದೆಯೊಂದಿಗೆ ಡೆಪ್ಯೂಟಿ ಚೀಫ್ ಆಫ್ ಜನರಲ್ ಸ್ಟಾಫ್ ಆಗಿ ನೇಮಿಸಲಾಯಿತು.
ಇದನ್ನೂ ಓದಿ: ಡಾ.ನೀರಜ್ ಅವರ ಫಾರ್ಮ್ ಹೌಸ್‌ನಲ್ಲಿಂದು ಸಂಜೆಯೊಳಗೆ ಸೌಂದರ್ಯ ಅಂತ್ಯಕ್ರಿಯೆ
ಕಾರ್ಯಪ್ಪನವರು ಭಾರತೀಯ ಸೈನ್ಯದ ಮೊದಲ ಕಮಾಂಡರ್ ಇನ್ ಚೀಫ್ ನಂತರ ಪಾಕಿಸ್ತಾನದ ಜೊತೆ ಯುದ್ಧ ಪ್ರಾರಂಭವಾದಾಗ ಈಸ್ಟರ್ನ್ ಆರ್ಮಿ ಕಮಾಂಡರ್ ಮತ್ತು ವೆಸ್ಟರ್ನ್ ಕಮಾಂಡ್ ಜನರಲ್ ಕಮಾಂಡಿಂಗ್ ಇನ್ ಚೀಫ್ ಆದರು.
ಬಳಿಕ 1949ರ ಜನವರಿ 15 ರಂದು ಸ್ವತಂತ್ರ ಭಾರತೀಯ ಸೈನ್ಯದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ನೇಮಿಸಲಾಯಿತು. ಕಾರ್ಯಪ್ಪನವರಿಗೆ ಅಮೆರಿಕದ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಅವರು 'ಆರ್ಡರ್ ಆಫ್ ದಿ ಲೀಜನ್ ಆಫ್ ಮೆರಿಟ್ನ ಮುಖ್ಯ ಕಮಾಂಡರ್' ಗೌರವ ಕೂಡ ಲಭಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ