ಕೊಡಗು : ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಆದರೆ ಇಲ್ಲಿನ ಜನರಿಗೆ ಭೂಕುಸಿತದ ಆತಂಕ ಮಾತ್ರ ಕಡಿಮೆಯಾಗಿಲ್ಲ. ಇಲ್ಲಿನ ಕುವೆಂಪು ಬಡಾವಣೆಯ ಹತ್ತಿರ ಅವೈಜ್ಞಾನಿಕವಾದ ಒಳಚರಂಡಿ ಕಾಮಗಾರಿ ನಡೆಸಲಾಗಿದ್ದು ಭೂಕುಸಿತಕ್ಕೆ ಕಾರಣವಾಗಿದೆ ಎಂದು ಬಡಾವಣೆಯ ನಿವಾಸಿಗಳು ದೂರಿದ್ದಾರೆ.
ಭೂಕುಸಿತಕ್ಕೆ ಕುಶಾಲನಗರದಲ್ಲಿ ಹರಿಯುವ ಹೊಳೆಯಲ್ಲೇ ಒಳಚರಂಡಿಯ ಪೈಪ್ ಲೈನ್ ಮತ್ತು ಮ್ಯಾನ್ಹೋಲ್ಗಳನ್ನು ನಿರ್ಮಾಣ ಮಾಡಿದ್ದು, ಇದರಿಂದಾಗಿ ಕಾವೇರಿ ನದಿಯ ದಂಡೆಯಲ್ಲಿ ಭೂಕುಸಿತ ಉಂಟಾಗುತ್ತಿದೆ ಎಂದು ಹೇಳಲಾಗ್ತಿದೆ.
ಒಳಚರಂಡಿ ಕಾಮಗಾರಿ ಮಾಡುವುದಕ್ಕೆ ಹೊಳೆಯ ದಂಡೆಯಲ್ಲೇ ಮಣ್ಣು ತೆಗೆದಿದ್ದು, ಕುವೆಂಪು ಬಡಾವಣೆಗೆ ಹೊಂದಿಕೊಂಡಿದ್ದ ಜಾಗ ಕುಸಿಯಲು ಆರಂಭಿಸಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು, ಸ್ಥಳದಲ್ಲಿದ್ದ ಬೃಹತ್ ಗಾತ್ರದ ಹೊಂಗೆ ಮರವು ಉರುಳಿ ಬಿದ್ದಿದೆ. ಜೊತೆಗೆ ಪಕ್ಕದಲ್ಲಿಯೇ ಇರುವ ಚಿಕ್ಕ ಉದ್ಯಾನಕ್ಕೂ ಹಾನಿಯಾಗಿದೆ. ಸದ್ಯ ಪ್ರವಾಹದ ಜೊತೆಗೆ ಭೂಕುಸಿತದ ಆತಂಕ ಎದುರಾಗಿದೆ ಎಂದು ಕುವೆಂಪು ಬಡಾವಣೆ ನಿವಾಸಿ ಸುಬ್ರಹ್ಮಣಿ ಹೇಳಿದ್ದಾರೆ.
ಜಲಮಂಡಳಿಯ ಅವೈಜ್ಞಾನಿಕ ಕಾಮಗಾರಿಗೆ ಭೂಕುಸಿತದ ಆತಂಕ ಎದುರಿಸುತ್ತಿರುವ ಬಡಾವಣೆ ನಿವಾಸಿಗಳು ಒಳಚರಂಡಿ ಮಂಡಳಿ ಹೊಳೆಗೆ ಹೊಂದಿಕೊಂಡಂತೆ ಯಾವುದೇ ಕಾಮಗಾರಿ ಮಾಡದಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಇಲ್ಲಿಗೆ ತಡೆಗೋಡೆ ನಿರ್ಮಿಸಿದರೆ ಮಾತ್ರವೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ ಅಕ್ಕಪಕ್ಕದಲ್ಲಿರುವ ಹಲವು ಕುಟುಂಬಗಳು ಸಮಸ್ಯೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಸದ್ಯ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ತಡೆಗೋಡೆ ಮಾಡಿಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಇದೇ ರೀತಿ ಭೂಕುಸಿತ ಮುಂದುವರೆದರೆ ಇಲ್ಲಿರುವ ಮೂರ್ನಾಲ್ಕು ಮನೆಗಳಿಗೆ ಸಮಸ್ಯೆಯಾಗಲಿದೆ ಎಂದು ಕುವೆಂಪು ಬಡಾವಣೆ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರು ಕ್ರಮಕೈಗೊಳ್ಳುವಂತೆ ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಪಾವಗಡದಲ್ಲಿ ಚಿರತೆ ಪ್ರತ್ಯಕ್ಷ, ಜನತೆಗೆ ಆತಂಕ