ಕೊಡಗು (ಕುಶಾಲನಗರ): ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕುಶಾಲನಗರಕ್ಕೆ ಕಳೆದ ಮೂರು ವರ್ಷಗಳಿಂದ ಪ್ರವಾಹದ ಭೀತಿ ಎದುರಾಗುತ್ತಲೇ ಇದೆ. ಮಳೆಗಾಲದಲ್ಲಿ ಕಣ್ಣೀರಿನ ಕಡಲಲ್ಲಿ ಕೈ ತೊಳೆಯುವ ನದಿ ತೀರದ ನಿವಾಸಿಗಳು, ಪ್ರಸ್ತುತ ಜಲಮಂಡಳಿ ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ನದಿ ದಂಡೆಯ ಮಣ್ಣು ಕುಸಿಯುತ್ತಿದ್ದು, ಮತ್ತೊಮ್ಮೆ ಆತಂಕ ಎದುರಾಗಿದೆ.
ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಎನ್ನುವ ಗಾದೆ ಮಾತಿನಂತೆ ಜೀವನದಿ ಕಾವೇರಿಯ ಪ್ರವಾಹ ತಗ್ಗಿದ್ದರೂ, ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ಬಡಾವಣೆಯ ನದಿ ಪಾತ್ರದಲ್ಲಿ ಮಣ್ಣು ಕುಸಿಯುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಶುರುವಾಗಿದೆ.
ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ಪ್ರವಾಹ ಭೀತಿ ಕಳೆದ ಮೂರು ವರ್ಷಗಳಿಂದ ಸ್ಥಳೀಯರು ಪ್ರವಾಹದ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ಜಲಮಂಡಳಿ ಅಳವಡಿಸಿದ ಒಳಚರಂಡಿಯ ಪೈಪ್‌ಲೈನ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದೇ ಇಷ್ಟಕ್ಕೆಲ್ಲ ಕಾರಣ. ಪೈಪ್‌ಲೈನ್ ಅಳವಡಿಸಿರುವ ಜಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿವೆ. ಸಂಚಾರಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ರಸ್ತೆ ಹದಗೆಡುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೂ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲವೆಂದು ಇಲ್ಲಿನ ಜನತೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಬಡಾವಣೆಯಲ್ಲಿ ಮಾಜಿ ಸೈನಿಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ವಾಸಿಸುತ್ತಿದ್ದಾರೆ. ಈಗಾಗಲೇ ನಂಜುಂಡಸ್ವಾಮಿ ಎಂಬುವರ ಮನೆಯ ಗೋಡೆಯೊಂದು ಪ್ರವಾಹಕ್ಕೆ ಕುಸಿದಿದೆ. ಇದೇ ರೀತಿ ಹಲವು ಮನೆಗಳ ಗೋಡೆಗಳು ಶಿಥಿಲಾವಸ್ಥೆಯಲ್ಲಿವೆ. ಕಳೆದ ಮೂರು ವರ್ಷಗಳಿಂದ ಪ್ರವಾಹದ ನೀರು ಬಡಾವಣೆಯಲ್ಲಿ ಹರಿದು ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ, ಒಂದೇ ಒಂದು ರಸ್ತೆ ನಿರ್ಮಿಸದ ಜಿಲ್ಲಾಡಳಿತದ ವಿರುದ್ಧ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.