ಕೊಡಗು:ಹತ್ತು ತಿಂಗಳ ಹಿಂದೆ ಕೊಡಗಿನ ತೋರಾದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದಿಂದ ಹತ್ತಾರು ಜನರ ಪ್ರಾಣಪಕ್ಷಿ ಹಾರಿ ಹೋಗಿತ್ತು. ನೂರಾರು ಎಕರೆಯಷ್ಟು ತೋಟ, ಗದ್ದೆಗಳೆಲ್ಲಾ ಮುಚ್ಚಿ ಹೋಗಿ ಹಲವು ಕುಟುಂಬಗಳು ನಿರ್ಗತಿಕವಾಗಿದ್ದವು.
ಆದರೆ ಆದ್ಯಾವುದನ್ನೂ ಲೆಕ್ಕಿಸದ ಜನರು ಅದೇ ಪ್ರದೇಶದಲ್ಲೇ ಉಳಿದು ಮತ್ತೆ ತಮ್ಮ ಹೊಸ ಬದುಕು ಆರಂಭಿಸಿದ್ದರು. ಇದೀಗ ಮಳೆಗಾಲ ಆರಂಭವಾಗಿದ್ದು, ಕಳೆದ ಬಾರಿಯ ದುರಂತದ ಕಹಿ ಜನರನ್ನು ಆತಂಕಕ್ಕೆ ದೂಡಿದೆ. ಹಾಗಾದರೆ ಅವರ ಹೊಸ ಬದುಕು ಹೇಗಿದೆ, ಎದುರಾಗಿರುವ ಆತಂಕ ಎಂತಹದ್ದು ಎನ್ನೋದನ್ನು ನೀವೇ ನೋಡಿ.
ಮಳೆಗಾಲ ಆರಂಭದಲ್ಲೇ ಕೊಡಗಿನಲ್ಲಿ ಭೀತಿ: ಭರವಸೆ ಬದುಕಲ್ಲೀಗ ಆತಂಕ ಕಳೆದ ಎರಡು ವರ್ಷಗಳು ಕೊಡಗು ಜಿಲ್ಲೆಯ ಪಾಲಿಗೆ ದುರಂತದ ವರ್ಷಗಳೇ ಸರಿ. 2018ರಲ್ಲಿ ಕಂಡು ಕೇಳರಿಯದಂತಹ ಭೂ ಕುಸಿತವಾಗಿದ್ದರೆ, 2019ರಲ್ಲಿ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿತ್ತು. ಜೊತೆಗೆ ವಿರಾಜಪೇಟೆ ತಾಲೂಕಿನ ತೋರಾದಲ್ಲಿ ಭೂ ಕುಸಿತವೂ ಆಗಿ ಹತ್ತಾರು ಜನರು ಕಣ್ಮರೆಯಾದರು.
ತೋರಾ ಬೆಟ್ಟವೇ ಸ್ಫೋಟಗೊಂಡು ನೂರಾರು ಪ್ರದೇಶಕ್ಕೆ ಭಾರೀ ಪ್ರಮಾಣದ ಮಣ್ಣು ನೀರಿನಂತೆ ಹರಿದು ತುಂಬಿತ್ತು. ಅಲ್ಲಿನ ಪ್ರಭು ಎಂಬುವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡರೆ, ಹರೀಶ್ ಎಂಬುವರು ತುಂಬು ಗರ್ಭಿಣಿಯನ್ನೇ ಕಳೆದುಕೊಂಡರು. ಇವರ ಜೊತೆಗೆ ಇನ್ನೂ ಹಲವು ಜನರು ಕಣ್ಮರೆಯಾದರು.
ಇದೆಲ್ಲಾ ನೋವು ನುಂಗಿಕೊಂಡು ಎದೆ ಗಟ್ಟಿ ಮಾಡಿಕೊಂಡ ಜನರು ಅಲ್ಲಿಯೇ ಕೃಷಿ ಆರಂಭಿಸಿ ತಮ್ಮ ಬದುಕು ಕಟ್ಟಿಕೊಂಡರು. ಕಳೆದ ಬಾರಿ ತಾವು ಅನುಭವಿಸಿದ ಯಾತನೆಯಿಂದಲೇ ಧೈರ್ಯ ತುಂಬಿಕೊಂಡಿರುವ ಜನರು, ಈ ಬಾರಿ ಏನಾದರೂ ಪ್ರಾಕೃತಿಕ ದುರಂತ ಸಂಭವಿಸಿದರೆ ತಮ್ಮ ಕುಟುಂಬವನ್ನು ಕಾಪಾಡಿಕೊಳ್ಳುವ ಮತ್ತು ಊರಿನವರನ್ನು ರಕ್ಷಿಸುವುದಕ್ಕೆ ನಾವೇ ತಯಾರಿದ್ದೇವೆ ಎಂದು ಧೈರ್ಯದಿಂದ ಹೇಳುತ್ತಾರೆ.
ಒಂದೆಡೆ ಕಳೆದ ಬಾರಿಯ ದುರಂತ ಜನರಿಗೆ ಸಾಕಷ್ಟು ಪಾಠ ಕಲಿಸಿದೆಯಾದರೂ ಆತಂಕ ಮಾತ್ರ ಇದ್ದೇ ಇದೆ. ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಜೋರಾಗಿ ಮಳೆ ಬಂದಾಗಲೆಲ್ಲಾ ಜನರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಆದರೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಮಾಡದಿರುವುದು ನಮ್ಮನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ ಎನ್ನುತ್ತಾರೆ.
ತೋರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಇದರಿಂದಾಗಿ ಮಳೆ ಬಂತೆಂದರೆ ಫೋನ್ ಸಂಪರ್ಕ ಕೂಡ ಇರುವುದಿಲ್ಲ. ಕಳೆದ ಬಾರಿ ಫೋನ್ ಸಂಪರ್ಕ ಇದ್ದಿದ್ದರೆ ಮೂರು ಕುಟುಂಬಗಳ ಏಳು ಜನರು ಬದುಕುತ್ತಿದ್ದರು. ಹೀಗಾಗಿ ಈ ಬಾರಿಯೂ ಆತಂಕ ಇದ್ದು, ಒಂದು ವೇಳೆ ಮತ್ತೆ ಅಂತಹ ದುರುಂತ ಸಂಭವಿಸಿದಲ್ಲಿ 60ಕ್ಕೂ ಹೆಚ್ಚು ಕುಟುಂಬಗಳನ್ನು ರಕ್ಷಿಸಲು ಅವಕಾಶವಿಲ್ಲದಂತೆ ಆಗುತ್ತದೆ.
ಪ್ರಾಕೃತಿಕ ಆತಂಕ ಎದುರಿಸಲು ನಾವು ಸಿದ್ಧರಿದ್ದರೂ ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸದೇ ಇರುವುದು ನಾವು ಆತಂಕ ಎದುರಿಸುವಂತೆ ಮಾಡಿದೆ ಎನ್ನೋದು ಜನರ ಅಳಲು.
ಒಟ್ಟಿನಲ್ಲಿ ಕಳೆದ ಬಾರಿ ತೋರಾದಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಸರ್ವವನ್ನೂ ಕಳೆದುಕೊಂಡಿದ್ದ ಹಲವು ಕುಟುಂಬಗಳು ಮತ್ತೆ ಬದುಕು ಕಟ್ಟಿಕೊಂಡಿವೆ. ಆದರೆ ಕಳೆದ ವರ್ಷದ ಭೀಕರ ಅನುಭವ ಮಳೆಗಾಲ ಆರಂಭವಾಗುತ್ತಿದ್ದಂತೆ ಜನರನ್ನು ಆತಂಕಕ್ಕೆ ದೂಡಿರುವುದಂತು ನಿಜ.