ಕರ್ನಾಟಕ

karnataka

ETV Bharat / state

ಗಡಿ ಮೀರಿದ ಪ್ರೀತಿ... ಮಗನಿಗಾಗಿ ಕೇರಳದಿಂದ ಕೊಡಗಿಗೆ ಕಾಲ್ನಡಿಗೆಯಲ್ಲೇ ಬಂದ ಅಪ್ಪ! - ಕೊಡಗು ಲಾಕ್‍ಡೌನ್

ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ಮಹಾಮಾರಿ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತು ತಂದಿರುವುದಷ್ಟೇ ಅಲ್ಲದೇ ಹೆತ್ತವರಿಂದ ಮುದ್ದು ಕಂದಮ್ಮಗಳ ಪ್ರೀತಿಯನ್ನು ದೂರ ಮಾಡಿದೆ. ಅದಕ್ಕೆ ಕೇರಳ - ಕರ್ನಾಟಕದ ಗಡಿಯಲ್ಲಿ ನಡೆದ ಮನಕಲಕುವ ಈ ದೃಶ್ಯವೇ ಸಾಕ್ಷಿಯಂತಿದೆ.

father and son reunites
ತಂದೆ ಮಗನ ಸಂಗಮ

By

Published : Apr 15, 2020, 10:40 AM IST

ಮಡಿಕೇರಿ(ಕೊಡಗು):ಕೇರಳದ ಇರಿಟ್ಟಿಯ ರಾಜೇಶ್ ಅವರ ಮೂರು ವರ್ಷದ ಮಗು ಆದಿಕೇಶ್ ರಾಜ್ ಕೊಡಗಿನ ಮಡಿಕೇರಿಯ ತನ್ನ ಅಜ್ಜಿ ಮನೆಗೆ ಕಳೆದ 25 ದಿನಗಳ ಹಿಂದೆ ಬಂದಿದ್ದ.

ಬಂದ ಎರಡೇ ದಿನಕ್ಕೆ ಕೊರೊನಾ ಮಹಾಮಾರಿಗೆ ಹೆದರಿ ಇಡೀ ದೇಶವೇ ಲಾಕ್‍ಡೌನ್ ಆಗಿತ್ತು. ಜೊತೆಗೆ ಕೊಡಗಿನಿಂದ ಕೇರಳದ ಇರಿಟ್ಟಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯನ್ನು ಗಡಿಭಾಗ ಮಾಕುಟ್ಟದಲ್ಲಿ ಸಂಪೂರ್ಣ ಬಂದ್ ಮಾಡಲಾಗಿತ್ತು.

ಮಗನಿಗಾಗಿ 13 ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಬಂದ ತಂದೆ

ಹೀಗಾಗಿ ಮೂರು ವರ್ಷದ ಕಂದ ಆದಿಕೇಶ್ ರಾಜ್ ಮಡಿಕೇರಿಯಲ್ಲೇ ಉಳಿಯಬೇಕಾಗಿತ್ತು. ಹೀಗೆ ಕೊರೊನಾ ಭೀತಿಗೆ ರಾಜ್ಯ- ರಾಜ್ಯಗಳ ನಡುವಿನ ಗಡಿಯೇ ಬಂದ್ ಆಗಿದ್ದರಿಂದ ಮೂರು ವರ್ಷದ ಮಗು ಆದಿಕೇಶ್ ರಾಜ್ ಬರೋಬ್ಬರಿ 25 ದಿನಗಳ ಕಾಲ ತಂದೆ- ತಾಯಿಯಿಂದ ದೂರವಾಗಿ ಹಗಲು ರಾತ್ರಿ ಅವರನ್ನು ನೆನೆದು ಅಳುತ್ತಾ ಅಜ್ಜಿ ಮನೆಯಲ್ಲಿ ಕಾಲ ಕಳೆಯಬೇಕಾಗಿತ್ತು.

ದಿನಗಳು ಕಳೆದಂತೆ ಊಟ ತಿಂಡಿ ಮಾಡುವುದನ್ನೇ ನಿಲ್ಲಿಸಿದ್ದ ಆದಿಕೇಶ್ ರಾಜ್​ನನ್ನು ತಂದೆ - ತಾಯಿಯ ಬಳಿಗೆ ಸೇರಿಸದೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ ಹೇಗೋ ಪರದಾಡಿ ಮಡಿಕೇರಿಯಿಂದ 55 ಕಿ.ಮೀ. ದೂರದಲ್ಲಿ ಗಡಿಯನ್ನು ಬಂದ್ ಮಾಡಿರುವ ಜಾಗಕ್ಕೆ ಆದಿಕೇಶ್ ರಾಜ್​ನನ್ನು ಸಂಬಂಧಿಗಳು ಕರೆದೊಯ್ದಿದ್ದರು.

ತನ್ನ ಮಗ ತಮ್ಮನ್ನು ನೆನೆದು ಅಳುತ್ತಿರುವ ವಿಷಯ ತಿಳಿದ ತಂದೆ ರಾಜೇಶ್ ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿಯಿಂದ 13 ಕಿ.ಮೀ. ದೂರದಲ್ಲಿ ಗಡಿ ಬಂದ್ ಆಗಿರುವ ಕರ್ನಾಟಕದ ಮಾಕುಟ್ಟಕ್ಕೆ ನಡೆದೇ ಬಂದಿದ್ದರು. ಆಗ ತಂದೆಯನ್ನು ನೋಡಿದ್ದೇ ತಡ, ಮೂರು ವರ್ಷದ ಮಗು ಆದಿಕೇಶ್ ರಾಜ್​ನ ಆನಂದಕ್ಕೆ ಪಾರವೇ ಇರಲಿಲ್ಲ. ತಂದೆಯ ತೋಳಿಗೆ ಹೋಗಿ ಕೊರಳನ್ನು ಬಿಗಿದಪ್ಪಿಕೊಂಡ. ತನ್ನ ತಂದೆಯನ್ನು ಸೇರಿಸಿದ ತನ್ನ ಮಾವನ ಗಡ್ಡವನ್ನು ಎಳೆದಾಡಿ ಮುತ್ತು ಕೊಟ್ಟ. ತಂದೆ - ತಾಯಿನ್ನು ಸೇರಿದ ಆ ಕ್ಷಣ ತಂದೆ ಮತ್ತು ಮಗುವಿನ ಸಂತಸ ಇಮ್ಮಡಿಯಾಗಿತ್ತು.

ಕೊರೊನಾ ಹರಡದಂತೆ ರಾಜ್ಯದ ಗಡಿಗೆ ಆಳೆತ್ತರದ ಮಣ್ಣು ಸುರಿದಿದ್ದರೂ ಆ ಕರುಳ ಬಳ್ಳಿ ಸಂಬಂಧ ಮಾತ್ರ ಎಲ್ಲಾ ಅಡೆತಡೆಗಳನ್ನು ಮೀರಿ ಒಂದಾದ ಆ ಕ್ಷಣ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ABOUT THE AUTHOR

...view details