ಕೊಡಗು ಜಿಲ್ಲೆಯಲ್ಲಿ ಹೆಚ್ಚಾದ ಆನೆ ಮಾನವ ಸಂಘರ್ಷ ಕೊಡಗು : ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮುಂದುವರೆದಿದ್ದು, ಮುಂಜಾನೆ ಕಾಡಾನೆ ದಾಳಿ ಮಾಡಿ ವೃದ್ಧನೋರ್ವರನ್ನು ಗಂಭೀರವಾಗಿ ಗಾಯಗೊಳಿಸಿದೆ. ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ವಿರಾಜಪೇಟೆ ತಾಲ್ಲೂಕಿನ ಕಡಂಗ ಮರೂರು ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಕಡಂಗ ಮರೂರು ಗ್ರಾಮದ ನಿವಾಸಿ 73 ವರ್ಷ ವಯಸ್ಸಿನ ಅಮ್ಮಂಡ ಸುಬ್ರಹ್ಮಣಿ ಮನೆಯಿಂದ ಹಾಲು ತರಲು ಅಂಗಡಿಗೆ ತೆರಳುವ ಸಂದರ್ಭದಲ್ಲಿ ಕಡಂಗ ಮರೂರು ಗ್ರಾಮದ ಭದ್ರಕಾಳಿ ದೇವಾಲಯದ ಸಮೀಪದ ತೋಟದಿಂದ ಏಕಾಏಕಿ ಬಂದ ಮೂರು ಕಾಡಾನೆಗಳು ಅವರ ಮೇಲೆ ದಾಳಿ ನಡೆಸಿವೆ.
ಕಾಡಾನೆ ದಾಳಿಯಿಂದ ಕೈ ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ದಿನಬೆಳಗಾದ್ರೆ ಸಾಕು ಕಾಡಿನಿಂದ ನಾಡಿಗೆ ಲಗ್ಗೆ ಇಡೋ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುವುದರೊಂದಿಗೆ ಜನರ ಮೇಲೂ ಕೂಡ ದಾಳಿ ನಡೆಸುತ್ತಿವೆ. ಇದರಿಂದಾಗಿ ಜನರು ಓಡಾಡಲು ಕೂಡ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವಂತೆ ಕೊಡಗಿನ ಜನತೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ವಕ್ತಾರ ಸಂಕೇತ ಪೂವಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಕಡಬದಲ್ಲೂ ಕಾಡಾನೆ ದಾಳಿ.. ವ್ಯಕ್ತಿಗೆ ಗಂಭೀರ ಗಾಯ:ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ಮರ್ಧಾಳ-ಕೊಣಾಜೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಡಬದ ಐತೂರು ಗ್ರಾಮದ ಮರ್ಧಾಳ-ಕೊಣಾಜೆ ರಸ್ತೆಯಲ್ಲಿ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ಮಾಡಿದೆ. ಐತೂರು ಸಮೀಪದ ನೆಲ್ಯಡ್ಕದ ಸುಳ್ಯ ಎಂಬಲ್ಲಿ ಘಟನೆ ನಡೆದಿದೆ. ಇಲ್ಲಿನ ಗೇರ್ತಿಲ ನಿವಾಸಿ ಚೋಮ ಮುಗೇರ ಎಂಬವರ ಮೇಲೆ ಕಾಡಾನೆಯು ದಾಳಿ ನಡೆಸಿದೆ. ಚೋಮ ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ.
ಸದ್ಯ ಚೋಮ ಅವರ ಸ್ಥಿತಿಯು ಚಿಂತಾಜನಕವಾಗಿದ್ದು, ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಲಾಗಿದೆ ಎಂಬುದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇದೀಗ ಪದೇ ಪದೆ ಕಾಡಾನೆ ದಾಳಿಗಳು ನಡೆಯುತ್ತಿವೆ. ಕಳೆದ ಒಂದು ವರ್ಷಗಳ ಅಂತರದಲ್ಲಿ ಈ ಪ್ರದೇಶದ ಸಮೀಪದಲ್ಲಿ ಮೂವರನ್ನು ಕಾಡಾನೆ ಬಲಿ ಪಡೆದಿದ್ದು, ಮಾತ್ರವಲ್ಲದೇ ಕೆಲವರ ಮೇಲೆ ದಾಳಿಗಳು, ಕೃಷಿ ನಾಶದಂತಹ ಘಟನೆಗಳು ದಿನಂಪ್ರತಿ ನಡೆಯುತ್ತಲೇ ಇವೆ.
ಇದನ್ನೂ ಓದಿ:ಚಿಕ್ಕಮಗಳೂರು : ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು.. ಕಾಫಿ, ಅಡಿಕೆ ಬೆಳೆ ನಾಶ