ಕೊಡಗು: ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಕಾಡಾನೆ ಗಂಭೀರವಾಗಿ ದಾಳಿ ನಡೆಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ವಾಲ್ನೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾಡಾನೆ ದಾಳಿಗೆ ಗಾಯಗೊಂಡ ಮಹಿಳೆ ಕಲಾವತಿ (55) ಎಂಬುವರು ಕಾಡಾನೆ ದಾಳಿಗೆ ಒಳಗಾದ ಮಹಿಳೆ. ಬೆಳಗ್ಗೆ 8:15 ರ ಸಮಯದಲ್ಲಿ ಮೂವರು ಮಹಿಳೆಯರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗವೊಂದು ದಾಳಿ ಮಾಡಿದೆ. ಪರಿಣಾಮ ಆಕೆಯ ತಲೆ ಹಾಗೂ ಕೈ ಕಾಲು ಭಾಗಗಳಿಗೆ ಗಾಯಗಳಾಗಿದ್ದು ಆಕೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಮಹಿಳೆಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಥವಾ ಮಂಗಳೂರಿಗೆ ಕರೆದೊಯ್ಯುವ ಸಾಧ್ಯತೆಗಳಿವೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವು ಆನೆಗಳನ್ನು ಹಿಡಿಯುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ನಿಜವಾಗಿಯೂ ಉಪಟಳ ಕೊಡುವ ಆನೆಗಳನ್ನು ಅವರು ಹಿಡಿಯುತ್ತಿಲ್ಲ. ಈ ಭಾಗದಲ್ಲಿ ಪ್ರತಿನಿತ್ಯ ಆನೆಗಳ ಹಾವಳಿ ವಿಪರೀತವಾಗಿದೆ. ರೈಲ್ವೆ ಬ್ಯಾರಿಕೇಡ್ ಆಮೆ ಗತಿಯಲ್ಲಿ ಆಗುತ್ತಿದೆ. ಪುಂಡಾನೆ ಹಿಡಿಯಲು ಸರ್ಕಾರ ಬಿಡುಗಡೆ ಮಾಡಿರುವ ಹಣ ಏನಾಗುತ್ತಿದೆ ಎಂದು ವಾಲ್ನೂರು ನಿವಾಸಿ ನರೇಂದ್ರ ಅಧಿಕಾರಿಗಳನ್ನು ಕೇಳುತ್ತಿದ್ದಾರೆ.