ಕೊಡಗು :ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. 40 ವರ್ಷಗಳ ಹಿಂದೆ ತೆರೆಕಂಡ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಚಿತ್ರೀಕರಿಸಲಾದ ಆ ‘ಎಡಕಲ್ಲು ಗುಡ್ಡ’ ಈಗ ಚಾರಣಕ್ಕೆ ಫೇಮಸ್ ಆಗಿದೆ.
ಕೊಡಗು-ಹಾಸನ ಗಡಿಯಲ್ಲಿರೋ ‘ಗವಿಸಿದ್ದೇಶ್ವರ’ ಬೆಟ್ಟವನ್ನು ಎಡಕಲ್ಲು ಗುಡ್ಡ ಅಂತಾನೂ ಕರೆಯಲಾಗುತ್ತೆ. ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ 8 ಕಿ.ಮೀ. ದೂರ ಸಾಗಿದರೆ ಉಚ್ಚಂಗಿ ಗ್ರಾಮ ಸಿಗಲಿದೆ. ಇಲ್ಲಿಂದ ಕಚ್ಚಾ ರಸ್ತೆಯಲ್ಲಿ ಸುಮಾರು 4 ಕಿ.ಮೀ ದೂರ ನಡೆದು ಸಾಗಿದರೆ ಎಡಕಲ್ಲು ಗುಡ್ಡ ಎದುರಾಗುತ್ತದೆ.
ಒಂದು ದಿನದ ಚಾರಣಕ್ಕೆ ಹೇಳಿ ಮಾಡಿಸಿದ ಜಾಗ ಎಡಕಲ್ಲು ಗುಡ್ಡ.. ಗುಡ್ಡದ ಮೇಲೆ ಸಾಗಿದರೆ ಕಣ್ಣು ಹಾಯಿಸದಷ್ಟು ದೂರದವೆರಗೂ ಬರೀ ಹಸಿರು ಹೊದಿಕೆ ಬಿಟ್ಟು ಬೇರೇನೂ ಕಾಣಿಸಲ್ಲ. ಇಂತಹ ಹಸಿರ ಕಾಶಿ ಕಣ್ತುಂಬಿಕೊಳ್ಳಲು ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ಬೆಟ್ಟ ಅದೆಷ್ಟು ಸೊಗಸಾಗಿದ್ಯೋ ಅಷ್ಟೇ ಅಪಾಯಕಾರಿಯೂ ಹೌದು.
ಬೆಟ್ಟದ ಒಂದು ತುದಿ ಕಡಿದಾಗಿದ್ದು, ಆಳವಾದ ಪ್ರಪಾತವಿದೆ. ಅಚ್ಚರಿ ಅಂದ್ರೇ ಇಲ್ಲೊಂದು ಕಲ್ಲಿನ ಅಟ್ಟಣಿಗೆಯಿದ್ದು, 5 ಬೃಹತ್ ಬಂಡೆಗಳನ್ನು ಒಂದರ ಮೇಲೊಂದು ಜೋಡಿಸಿಡಲಾಗಿದೆ. ಈ ಸುಂದರ ದೃಶ್ಯ ಕಂಡು ಪ್ರವಾಸಿಗರಿಗೂ ಅಚ್ಚುಮೆಚ್ಚು.
ಹೆಚ್ಚಿನದಾಗಿ ಒಂದು ದಿನದ ಚಾರಣಕ್ಕೆ ಬರುವವರು ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳುತ್ತಾರೆ.