ಕೊಡಗು: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಚೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕಳೆದ ಒಂದು ವಾರದಿಂದ ಇಲ್ಲಿನ ಅರೆಕಾಡು ನೇತಾಜಿ ನಗರದ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಸಂಬಂಧ ಗ್ರಾಮದ ಮಹಿಳೆಯರು ಕೊಡಗಳನ್ನು ಹಿಡಿದು ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಿದ್ದಾಪುರ ಸಮೀಪದ ಅರೆಕಾಡುವಿನಲ್ಲಿ ಜನರು ಕುಡಿಯುವ ನೀರಿಗೆ ಒತ್ತಾಯಿಸಿ ಬಿಂದಿಗೆಗಳನ್ನು ಹಿಡಿದು ಚೆಸ್ಕಾಂ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಚೆಸ್ಕಾಂ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಅರೆಕಾಡು ನೇತಾಜಿ ನಗರದಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆಯರು ಖಾಲಿ ಕೊಡ ಹಿಡಿದು ಗ್ರಾಮದಿಂದ ಮೆರವಣಿಗೆಯಲ್ಲಿ ಆಗಮಿಸಿ ಅರೆಕಾಡು ಹೊಸ್ಕೇರಿ ಗ್ರಾಮ ಪಂಚಾಯಿತ್ ಕಚೇರಿ ಮುಂದೆ ಪತಿಭಟನೆ ನಡೆಸಿದರು. ಈ ವೇಳೆ
ಚೆಸ್ಕಾಂ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ನೇತಾಜಿ ನಗರದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದೆ. ಹೆಚ್ಚಿನವರು ಕಾರ್ಮಿಕ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈಗಾಗಲೇ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ವೊಂದನ್ನು ನಿರ್ಮಾಣ ಮಾಡಲಾಗಿದೆ. ಆದರೆ ವಿದ್ಯುತ್ ಕೈಕೊಟ್ಟಿರುವುದರಿಂದ ಕಳೆದ 12 ದಿನಗಳಿಂದ ಇಲ್ಲಿನ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಕುಡಿಯಲು ಟ್ಯಾಂಕ್ ನೀರನ್ನೇ ಅವಲಂಬಿಸಿರುವ ಗ್ರಾಮಸ್ಥರು ಪರ್ಯಾಯ ನೀರಿನ ವ್ಯವಸ್ಥೆ ಇಲ್ಲದೆ ಪರಿತಪಿಸುವಂತಾಗಿದೆ.