ಕೊಡಗು :ಜಿಲ್ಲೆಯ ಪ್ರಸಿದ್ಧ ಅರಮನೆಯೊಂದು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿತ್ತು. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಅರಮನೆಗೆ ಕಾಯಕಲ್ಪ ಕಲ್ಪಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ಈ ಅರಮನೆ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ನವೀಕರಣ ಕಾರ್ಯ ಆರಂಭವಾಗಿ ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.
ಒಂದೆಡೆ ಕುಂಟುತ್ತಾ ಸಾಗುತ್ತಿರುವ ಅರಮನೆ ದುರಸ್ಥಿ ಕಾರ್ಯ, ಇನ್ನೊಂದೆಡೆ ನವೀಕರಣ ಕಾಮಗಾರಿ ಕುರಿತು ಡಿಸಿಗೆ ವರದಿ ಕೇಳಿದ ನ್ಯಾಯಾಲಯ, ಮತ್ತೊಂದೆಡೆ ಅರಮನೆ ಕಾಮಗಾರಿ ವೀಕ್ಷಿಸುತ್ತಿರುವ ಜಿಲ್ಲಾಧಿಕಾರಿ. ಈ ದೃಶ್ಯ ಕಂಡುಬಂದಿದ್ದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೃದಯಭಾಗದಲ್ಲಿರುವ ಕೋಟೆ ಆವರಣದಲ್ಲಿ.
ಇದು ರಾಜ ಮಹಾರಾಜರು ಇದ್ದ ಅರಮನೆ. ಇಲ್ಲಿ ಸಾಕಷ್ಟು ಯುದ್ಧಗಳು ನಡೆದರೂ ಈ ಒಂದು ಕೋಟೆ ಮಾತ್ರ ಮಳೆ ಗಾಳಿಗೆ ಅಂಜದೆ ಇನ್ನೂ ಗಟ್ಟಿ ಮುಟ್ಟಾಗಿತ್ತು. ಕೆಲ ವರ್ಷಗಳ ಹಿಂದೆಯಷ್ಟೇ ಇಲ್ಲಿದ್ದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳನ್ನು ಇಲ್ಲಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಬಳಿಕ ಈ ಕೋಟೆಯನ್ನು ಪ್ರಾಚ್ಯವಸ್ತು ಇಲಾಖೆಯು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ನಂತರ ಇಲ್ಲಿನ ಎಲ್ಲ ಕಾರ್ಯವನ್ನು ಪ್ರಾಚ್ಯ ವಸ್ತು ಇಲಾಖೆಯು ನೋಡಿಕೊಳ್ಳುತ್ತಿತ್ತು.
ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ: ಇನ್ನು ಪುರಾತತ್ವ ಇಲಾಖೆಯು 2021ರ ಅಕ್ಟೋಬರ್ ತಿಂಗಳಲ್ಲಿ 10.70 ಕೋಟಿ ವೆಚ್ಚದಲ್ಲಿ ಅರಮನೆ ನವೀಕರಣ ಕಾರ್ಯವನ್ನು ಆರಂಭಿಸಿತ್ತು. ಕಾಮಗಾರಿ ಆರಂಭವಾಗಿ ಸರಿಯಾಗಿ ಒಂದೂವರೆ ವರ್ಷ ಕಳೆದಿದ್ದು, ಕೇವಲ ಅರಮನೆಯ ಮೇಲ್ಛಾವಣಿಯ ಕೆಲಸ ಮಾತ್ರ ಮುಗಿದಿದೆ. ಇನ್ನುಳಿದ ಎಲ್ಲ ಕಾಮಗಾರಿಗಳೂ ಹಾಗೆ ಉಳಿದಿವೆ.