ಕೊಡಗು: ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿದ್ದು ಮಾತ್ರವಲ್ಲೇ ಕಾಡು ಕುರಿ ಹಾಗೂ ಜಿಂಕೆಯೊಂದನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ.
ಬಿರುನಾಣಿ-ಬಾಡಗರಕೇರಿ ಮೂಲದ ಕೆ.ಪ್ರೀತಂ, ಎ.ರಾಬಿನ್ ತಿಮ್ಮಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಆರೋಪಿಗಳು ಜಿಂಕೆ ಬೇಟೆಯಾಡಿದ್ದರು.
ಸೋಮವಾರ ಬೆಳಗಿನ 2 ಗಂಟೆಗೆ ಗುಂಡು ಹೊಡೆದು ಜಿಂಕೆ ಮರಿ ಹತ್ಯೆ ಮಾಡಲಾಗಿತ್ತು. ಕಾಡಿನೊಳಗೆ ಗುಂಡಿನ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆಧಿಕಾರಿಗಳು ಕಾರ್ಯಾಚರಣೆ ನಡೆಸಿದರೂ, ಯಾರೂ ಪತ್ತೆಯಾಗಿರಲಿಲ್ಲ.
ಸ್ಥಳೀಯರ ಮಾಹಿತಿ ಆಧರಿಸಿ, ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿ, ಆರೋಪಿ ಪ್ರೀತಮ್ ಮತ್ತು ದೇವಯ್ಯ ಎಂಬುವರನ್ನು ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಭರತ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ತೌಕ್ತೆ ಚಂಡಮಾರುತಕ್ಕೆ 8 ಮಂದಿ ಬಲಿ
ಆರೋಪಿಗಳಿಂದ ಎರಡು ಕೆ.ಜಿ ಜಿಂಕೆ ಮಾಂಸ, ಮೂರು ಕೆ.ಜಿ ಕುರಿ ಮಾಂಸ, ಒಂದು ಒಂಟಿ ನಳಿಕೆಯ ಕೋವಿ ಮತ್ತು ಮೂರು ಜೀವಂತ ಗುಂಡುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತನಿಖೆಯ ಸಮಯದಲ್ಲಿ ಆರೋಪಿಗಳು ಜೇನುಕಲ್ಲು ಬೆಟ್ಟ ಮೀಸಲು ಅರಣ್ಯಕ್ಕೆ ತೆರಳಿ ಬೇಟೆಯಾಡಿದ್ದಾಗಿ ಒಪ್ಪಿಕೊಂಡಿದ್ದು ಕುರಿ ಹಾಗೂ ಜಿಂಕೆ ಚರ್ಮವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈತನ ಜತೆಗೆ ಬೇಟೆಗೆ ತೆರಳಿದ್ದ ಸುರೇಶ ಎಂಬಾತನನ್ನೂ ಬಂಧಿಸಲಾಗಿದ್ದು, ಆರೋಪಿಗಳ ವಿರುದ್ದ 1972ರ ವನ್ಯ ಜೀವಿ ಕಾಯ್ದೆಯ 9, 39, 50,51, 56 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ 3 ಹಾಗೂ 25ರ ಅನ್ವಯ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.
ಆರೋಪಿಗಳನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲರನ್ನೂ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಂದೆಡೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.