ಕರ್ನಾಟಕ

karnataka

ETV Bharat / state

ಮೈಸೂರು ದಸರಾ ಆನೆಗಳಿಗೆ ಇನ್ನೂ ಬಾರದ ಕರೆ... ಗೊಂದಲದಲ್ಲಿ ಮಾವುತರು! - ದಸರಾ ವೈಭವ

ಪ್ರತೀ ವರ್ಷ ದಸರಾಗೆ ಇನ್ನೂ ಮೂರು ತಿಂಗಳಿರುವಾಗಲೇ ಸಂಸಾರ ಸಮೇತರಾಗಿ ಮೈಸೂರಿಗೆ ತೆರಳುತಿದ್ದೆವು. ಬನ್ನಿ ಮಂಟಪ, ಅರಮನೆ ಸೇರಿದಂತೆ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ತಾಲೀಮು ಮಾಡುತಿದ್ದೆವು ಅಂತಾರೆ ಮಾವುತರು.

elephants
ದಸರಾಗೆ ಆನೆ

By

Published : Sep 1, 2020, 1:14 PM IST

ಕೊಡಗು (ಕುಶಾಲನಗರ):ವಿಶ್ವವಿಖ್ಯಾತ ಮೈಸೂರು ದಸರಾ ನೋಡಲು ಬಲು ಸುಂದರ. ಈ ದಸರಾದ ಮೆರುಗನ್ನು ಹೆಚ್ಚಿಸುವುದೇ ಜಂಬೂ ಸವಾರಿ. ಆದರೆ ಕೊರೊನಾ ಮಹಾಮಾರಿಯಿಂದಾಗಿ ದಸರಾಗೆ ಆನೆಗಳು ಹೋಗುವುದಕ್ಕೆ ಇಂದಿಗೂ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಮಾವುತರು ಗೊಂದಲದಲ್ಲಿದ್ದಾರೆ.

ದುಬಾರೆಯಲ್ಲಿರುವ ದಸರಾ ಆನೆಗಳು

ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದಲೂ ಬರುವ ಲಕ್ಷಾಂತರ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಈ ಜಂಬೂ ಸವಾರಿಯಲ್ಲಿ ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ ಏಳು ಆನೆಗಳು ಭಾಗವಹಿಸಿದ್ದವು. ಸಾಕಾನೆ ಶಿಬಿರದ ಅರ್ಜುನ ಆನೆ ದಸರಾ ಅಂಬಾರಿಯನ್ನು ಹೊರುತ್ತಿತ್ತು. ದಸರಾಗೆ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಆನೆಗಳು ಮೈಸೂರು ಅರಮನೆ ಅಂಗಳದಲ್ಲಿ ಬೀಡು ಬಿಡುತ್ತಿದ್ದವು. ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಇದುವರೆಗೆ ಆನೆಗಳು ಹೋಗಲು ಯಾವುದೇ ಆದೇಶ ಬಂದಿಲ್ಲ.

ಜಂಬೂ ಸವಾರಿಯಲ್ಲಿ ಆನೆಗಳು ನಿರ್ಭೀತಿಯಿಂದ ಭಾಗವಹಿಸಬೇಕಾದರೆ ಅವುಗಳು ಮೈಸೂರಿನಲ್ಲಿ ಪಳಗಬೇಕು. ಅದಕ್ಕಾಗಿ ಕನಿಷ್ಠ ಒಂದು ತಿಂಗಳು ತಾಲೀಮು ನಡೆಸಬೇಕು. ಕೊನೆ ಹಂತದಲ್ಲಿ ಆನೆಗಳನ್ನು ಕರೆದು ತರುವಂತೆ ಹೇಳಿದರೆ ತಾಲೀಮು ಕಷ್ಟವಾಗಬಹುದು. ಒಂದು ವೇಳೆ ಆನೆಗಳನ್ನು ತರುವಂತೆ ಹೇಳಿದರೂ ಮೈಸೂರಿಗೆ ಹೋಗಲು ನಮಗೂ ಆತಂಕವಿದೆ. ನಾವೇನೋ ಮಾಸ್ಕ್​ಗಳನ್ನು ಹಾಕಿಕೊಂಡು ರಕ್ಷಣೆ ಪಡೆಯಬಹುದು. ಆದರೆ ಆನೆಗಳ ರಕ್ಷಣೆಯೇ ಕಷ್ಟ. ಅವುಗಳಿಗೆ ಯಾವ ಮಾಸ್ಕ್ ಹಾಕೋದು ಎನ್ನುತ್ತಾರೆ ಮಾವುತರು.

ಪ್ರತೀ ವರ್ಷ ದಸರಾಕ್ಕೆ ಇನ್ನೂ ಮೂರು ತಿಂಗಳಿರುವಾಗಲೇ ಸಂಸಾರ ಸಮೇತರಾಗಿ ಮೈಸೂರಿಗೆ ತೆರಳುತಿದ್ದೆವು. ಬನ್ನಿ ಮಂಟಪ, ಅರಮನೆ ಸೇರಿದಂತೆ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ತಾಲೀಮು ಮಾಡುತ್ತಿದ್ದೆವು. ಆದರೆ ಈ ಬಾರಿ ಇನ್ನೂ ಒಂದೂವರೆ ತಿಂಗಳಷ್ಟೇ ಇದ್ದರೂ ಆನೆಗಳನ್ನು ಕರೆದೊಯ್ಯಲು ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಪ್ರತೀ ಬಾರಿ ದಸರಾದಲ್ಲಿ ಭಾಗವಹಿಸುತ್ತಿದ್ದ ನಾವು ಈ ಬಾರಿ ದಸರಾದಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ ಎನ್ನುವಂತಾಗಿದೆ ಎನ್ನುತ್ತಾರೆ.

ಜಿಲ್ಲೆಯಿಂದ ಹರ್ಷ, ಅರ್ಜುನ, ಕಾವೇರಿ, ಧನಂಜಯ ಸೇರಿದಂತೆ ಏಳು ಆನೆಗಳು ಭಾಗವಹಿಸುತ್ತಿದ್ದವು. ಆದರೆ ಈ ಬಾರಿ ಆನೆಗಳ ಆಯ್ಕೆ ಕೂಡ ನಡೆದಿಲ್ಲ. ಇದರ ಜೊತೆಗೆ ಕೊರೊನಾ ರೋಗ ಇರುವುದರಿಂದ ಮೈಸೂರಿಗೆ ಹೋಗಲು ಸಾಕಷ್ಟು ಭಯ, ಆತಂಕವೂ ಇದೆ ಅನ್ನೋದು ಮಾವುತರ ಅಭಿಪ್ರಾಯ.

ABOUT THE AUTHOR

...view details