ಮಡಿಕೇರಿ (ಕೊಡಗು): ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಕೊರೊನಾ ಛಾಯೆ ಆವರಿಸಿದೆ.
ಸಾಂಪ್ರದಾಯಿಕ ದಸರಾ ಆಚರಣೆಗೆ ಮಡಿಕೇರಿಯಲ್ಲಿ ದೇವಾಲಯದ ಆಡಳಿತ ಸಮಿತಿ ತಯಾರಿ ನಡೆಸಿದ್ದು, ನಗರದ ನಾಲ್ಕು ಶಕ್ತಿ ದೇವತೆಗಳೂ ಸೇರಿದಂತೆ ಮಡಿಕೇರಿಯ ದಶ ದೇವಾಲಯಗಳಲ್ಲಿ ರಾತ್ರಿ ನಡೆಯುವ ಮೆರವಣಿಗೆಗೆ ಸಿದ್ದತೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ ನಾಡಹಬ್ಬ ಆಚರಿಸಲಾಗುತ್ತಿದೆ.
ಮಡಿಕೇರಿಯಲ್ಲಿ ಸರಳವಾಗಿ ದಸರಾ ಆಚರಣೆ ಕೊರೊನಾ ಹಿನ್ನೆಲೆ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಕಟ್ಟೆಚ್ಚರ ವಹಿಸಿವೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ದಸರಾ ಸಮಿತಿ ಮನವಿ ಮಾಡಿದೆ. ರಾತ್ರಿ ದಶ ದೇವಾಲಯಗಳಿಂದ ಅತ್ಯಂತ ಸರಳ ರೀತಿಯಲ್ಲಿ ಪಿಕ್‌ಅಪ್ ವಾಹನದಲ್ಲಿ ದೇವರ ಒಂದು ಮೂರ್ತಿಯನ್ನು ಇಟ್ಟು ಕಳಶದೊಂದಿಗೆ ನಗರದ ಬನ್ನಿ ಮಂಟಪಕ್ಕೆ ಮೆರವಣಿಗೆ ಸಾಗಲಿದೆ.
ಅಲ್ಲದೆ, ಈ ಬಾರಿ ಮಂಟಪಗಳ ಪ್ರದರ್ಶನ ಅಥವಾ ಬಹುಮಾನಗಳ ಸ್ಪರ್ಧೆಗಳು ಇಲ್ಲ. ಒಂದು ದೇವಾಲಯದ ಮಂಟಪದೊಂದಿಗೆ 20 ಮಂದಿ ಮಾತ್ರ ತೆರಳಲು ಅವಕಾಶ ಮಾಡಿಕೊಡಲಾಗಿದೆ.