ಕೊಡಗು :ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ಕಡಿಮೆಯಾಗಿದೆ. ವರ್ಷಧಾರೆ ಕಡಿಮೆಯಾಗುತ್ತಿದ್ದಂತೆ ಇತ್ತ ರೈತರ ಕೃಷಿ ಚಟುವಟಿಕೆಗಳು ಮತ್ತೆ ಬಿರುಸುಗೊಂಡಿವೆ.
ಈಗ ಭತ್ತದ ನಾಟಿ ಮಾಡ್ತಿದ್ದಾರೆ ಕೊಡಗಿನ ರೈತರು.. ಯಾವ ಹೊಲಗದ್ದೆಗಳತ್ತ ನೋಡಿದರೂ ರೈತರು ನಾಟಿ ಮಾಡುತ್ತಿರುವ ದೃಶ್ಯ ಕಾಣುತ್ತಿವೆ. ಸಾಮಾನ್ಯವಾಗಿ ಜೂನ್ ಕೊನೆಯಲ್ಲೋ, ಜುಲೈ ಮೊದಲ ವಾರದಲ್ಲೋ ನಾಟಿ ಕಾರ್ಯಗಳನ್ನು ಮಾಡೋದು ವಾಡಿಕೆ. ಆದರೆ, ಕೊಡಗು ಜಿಲ್ಲೆಯಲ್ಲಿ ಇದೀಗ ನಾಟಿ ಕಾರ್ಯ ಶುರುವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಕೊಡಗಿನಲ್ಲೂ ಸಾಮಾನ್ಯವಾಗಿಯೇ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಬಿತ್ತನೆ, ಗದ್ದೆ ನಾಟಿಗಳನ್ನು ಮಾಡುತ್ತಿದ್ದರು. ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾಗುತ್ತಿರುವ ಪ್ರವಾಹದಿಂದ ಇದೀಗ ಜಿಲ್ಲೆಯಲ್ಲಿ ಬಿತ್ತನೆಯ ಸಮಯವೇ ಬದಲಾಗಿದೆ.
ಮೂರು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಬರುವ ರಣಮಳೆಯಿಂದ ಪ್ರವಾಹದ ಜೊತೆಗೆ ಗುಡ್ಡ ಕುಸಿಯುತ್ತಿತ್ತು. ಇದರಿಂದಾಗಿ ಬಿತ್ತನೆ ಮಾಡಿದ್ದ ಬೆಳೆಗಳೆಲ್ಲವೂ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿತ್ತು. ಭಾರೀ ಪ್ರಮಾಣದ ಮಣ್ಣು ಬೆಳೆಗಳ ಮೇಲೆ ತುಂಬಿ ಬಿಡುತ್ತಿತ್ತು. ಇದರಿಂದ ಬೆಳೆದ ಬೆಳೆಯೆಲ್ಲಾ ನಾಶವಾಗಿ ರೈತರು ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಮಳೆ ಕಡಿಮೆಯಾದ ನಂತರ ಬಿತ್ತನೆ ಮಾಡೋದೆ ಒಳ್ಳೆಯದೆಂದು ನಿರ್ಧರಿಸಿರುವ ಸಾಕಷ್ಟು ರೈತರು ಈಗ ಕೃಷಿ ಕೆಲಸದತ್ತ ಮುಖ ಮಾಡಿದ್ದಾರೆ.
ಇನ್ನು ಮಳೆಗಾಲ ಮುಗಿಯುವ ಹಂತಕ್ಕೆ ಬಂದಿರುವುದರಿಂದ ಜನರನ್ನು ಬಳಸಿಕೊಂಡು ಬಿತ್ತನೆ ಮಾಡಿದರೆ ಇನ್ನಷ್ಟು ತಡವಾಗಬಹುದು. ಅವಧಿ ಮೀರಿ ಬಿತ್ತನೆ ಮಾಡಿದರೆ ಇಳುವರಿಯೂ ಕಡಿಮೆ ಆಗಬಹುದು ಎಂದು ಯಾಂತ್ರಿಕ ಕೃಷಿಯತ್ತಲೂ ರೈತರು ಮುಖ ಮಾಡಿದ್ದಾರೆ. ಹೊರ ಜಿಲ್ಲೆಯಿಂದಲೂ ಯಂತ್ರಗಳನ್ನು ತರಿಸಿ ಬಿತ್ತನೆ ಮಾಡುತ್ತಿದ್ದಾರೆ.