ಕೊಡಗು: ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತಗಳು ಸೃಷ್ಟಿಯಾಗಿವೆ. ಕಾವೇರಿ, ಲಕ್ಷ್ಮಣ ತೀರ್ಥ, ಕೊಟ್ಟೂರು ಹೊಳೆ ಸೇರಿದಂತೆ ಹಲವು ನದಿಗಳ ಪ್ರವಾಹದ ನೀರು ನುಗ್ಗಿದ್ದರಿಂದ ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿ ಬೆಳೆಯೂ ಹಾಳಾಗಿದೆ.
ನಾಲ್ಕೈದು ದಿನಗಳ ಕಾಲ ಭಾರಿ ಪ್ರಮಾಣದ ನೀರು ಹರಿದಿದ್ದರಿಂದ ಭತ್ತದ ಬೆಳೆ ಕೊಚ್ಚಿಹೋಗಿದೆ. ಇನ್ನು ಹಲವೆಡೆ ಭೂಕುಸಿತ ಉಂಟಾಗಿ ಬೆಳೆದ ಬೆಳೆಗಳ ಮೇಲೆ ಸಾವಿರಾರು ಟನ್ಗಳಷ್ಟು ಕಲ್ಲು ಮಣ್ಣು ಬಂದು ನಿಂತಿದೆ. ಹೀಗಾಗಿ ಬೆಳೆಯಷ್ಟೇ ಅಲ್ಲ ಹೊಲಗದ್ದೆಗಳು ನಾಶವಾಗಿವೆ. ಒಂದು ವರ್ಷವಲ್ಲ ಮುಂದಿನ ವರ್ಷವೂ ಅವುಗಳಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.