ಕೊಡಗು :ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಮತ್ತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ನಿಯಮಗಳನ್ನು ಜಾರಿಗೊಳಿಸಿದೆ. ಸದ್ಯ ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ರಾಜ್ಯಾದ್ಯಂತ ಹೆಚ್ಚಿನ ನಿಗಾ ವಹಿಸಲಾಗಿದೆ. ಅಂತೆಯೇ ಕೊಡಗು ಜಿಲ್ಲೆಯಲ್ಲೂ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಹಿನ್ನೆಲೆ ಕೊಡಗಿನ ಹೋಂ ಸ್ಟೇ, ರೆಸಾರ್ಟ್, ಪ್ರವಾಸಿ ತಾಣಗಳು, ಹೋಟೆಲ್ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಜಲ ಪ್ರಳಯ ಹಾಗೂ ಕೋವಿಡ್ನಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ತತ್ತರಿಸಿದೆ. ಇನ್ನೇನು ಇದರಿಂದ ಚೇತರಿಕೊಳ್ಳುತ್ತಿರುವ ಈ ಸಮಯದಲ್ಲಿ ಮತ್ತೆ ಕೊರೊನಾ ಜನರನ್ನು ಕಾಡುತ್ತಿದೆ.
ಪ್ರವಾಸೋದ್ಯಮಕ್ಕೆ ಹೊಡೆತ ಸಾಧ್ಯತೆ :ವೀಕೆಂಡ್ ಮತ್ತು ಹೊಸ ವರ್ಷದ ಆಚರಣೆಗೆ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಸಲವೂ ಕೊಡಗಿನ ಬಹುತೇಕ ಎಲ್ಲ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳು ಭರ್ತಿಯಾಗಿವೆ. ಇನ್ನು ಕೋವಿಡ್ ಹಿನ್ನಲೆ ಸರ್ಕಾರ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದರೆ ಇಲ್ಲಿನ ಪ್ರವಾಸೋದ್ಯಮಕ್ಕೆ ಮತ್ತೆ ಹೊಡೆತ ಬೀಳುವ ಆತಂಕ ಶುರುವಾಗಿದೆ. ಅಲ್ಲದೇ ಕೊಡಗಿಗೆ ಹೆಚ್ಚು ಪ್ರವಾಸಿಗರು ಆಗಮಿಸುವುದರಿಂದ ಸ್ಥಳೀಯರಿಗೆ ಕೊರೊನಾ ಭೀತಿ ಎದುರಾಗಿದೆ.