ಕೊಡಗು(ತಲಕಾವೇರಿ):ದಕ್ಷಿಣ ಭಾರತದ ಜೀವನದಿ ಹಾಗೂ ಕರ್ನಾಟಕದ ಜೀವನಾಡಿ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಶುರುವಾಗಿದೆ.
ನಾಳೆ ಬೆಳಗ್ಗೆ 7ಗಂಟೆ 3ನಿಮಿಷಕ್ಕೆ ಕನ್ಯಾರಾಶಿ, ತುಲಾ ಲಗ್ನದಲ್ಲಿ ಭಕ್ತ ಸಮೂಹಕ್ಕೆ ತಾಯಿ ಕಾವೇರಿ ತೀರ್ಥ ರೂಪಿಣಿಯಾಗಿ ದರ್ಶನ ಕರುಣಿಸುವ ಅಪರೂಪದ ಕ್ಷಣಗಳಿಗೆ ಈ ವರ್ಷ ಕೊರೊನಾ ಕರಿನೆರಳು ಬೀರಿದೆ. ಕೊರೊನಾ ತಪಾಸಣೆಗೆ ಒಳಗಾಗಿ ನೆಗೆಟಿವ್ ಸರ್ಟಿಫಿಕೇಟ್ ತರುವಂತಹ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ತಲಕಾವೇರಿಯಿಂದ ಪ್ರತ್ಯಕ್ಷ ವರದಿ
ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಅದ್ಭುತ ಕ್ಷಣಗಳಿಗೆ ಸಜ್ಜಾಗುತ್ತಿದೆ ಪುಣ್ಯಕ್ಷೇತ್ರ..! ಈ ವೇಳೆ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ದೇವಾಲಯದ ಆಡಳಿತ ಸಮಿತಿ ಹಾಗೂ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜನದಟ್ಟಣೆ ನಿಯಂತ್ರಿಸಲು ಎರಡು ಸಾಲುಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಭಕ್ತರನ್ನು ತೀರ್ಥ ಕುಂಡಿಕೆ ಬಳಿ ಬರದಂತೆ ತಡೆಯಲು ಬ್ರಹ್ಮ ಕುಂಡಿಕೆ ಬಳಿಯಿಂದ 50 ಮೀಟರ್ ಅಂತರದಲ್ಲಿ ತೀರ್ಥ ಪ್ರೋಕ್ಷಣೆಗೆ ಪ್ರತ್ಯೇಕವಾಗಿ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ತೀರ್ಥೋದ್ಭವದ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅನುಕೂಲ ಮಾಡಿಕೊಡಲು ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಕವರೇಜ್‌ಗೆ ವ್ಯವಸ್ಥೆ ಮಾಡಿಕೊಂಡಿವೆ.