ಕೊಡಗು: ಕೊರೊನಾ ಸೋಂಕಿತನ ಹೆಸರನ್ನು ಸರ್ಕಾರ ಬಹಿರಂಗ ಮಾಡುವುದಿಲ್ಲ. ಆದರೆ ಹೊರ ದೇಶದಿಂದ ಕೊಡಗಿಗೆ ಬಂದ ಸೋಂಕಿತನ ಹೆಸರನ್ನು ಅಧಿಕಾರಿಗಳೇ ಬಹಿರಂಗಗೊಳಿಸುವ ಮೂಲಕ ಎಡವಟ್ಟು ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಮಡಿಕೇರಿ ತಾಲೂಕಿನ ನಾಪೋಕ್ಲಿಗೆ ಬಂದಿದ್ದಾರೆ. ಆದರೆ ನಾಪೋಕ್ಲಿನ ತಮ್ಮ ಮನೆಯಲ್ಲಿರಬೇಕಾದ ವ್ಯಕ್ತಿ ವಿರಾಜಪೇಟೆ ಪಟ್ಟಣದ ಮೀನುಪೇಟೆಯಲ್ಲಿ ಇದ್ದಾರೆ. ವಿಷಯ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ವ್ಯಕ್ತಿಗೆ ಪಾಸಿಟಿವ್ ಬಂದಿದೆ.
ಇದರಿಂದ ವಿರಾಜಪೇಟೆ ಪಟ್ಟಣದ ಮೀನುಪೇಟೆಯನ್ನು ನಿಷೇಧಿತ ಪ್ರದೇಶವೆಂದು ಮಾಡಿದ್ದಾರೆ. ಜೊತೆಗೆ ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಅಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡುವಾಗ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಇದರಿಂದ ಸೋಂಕಿತ ವ್ಯಕ್ತಿಯ ಸ್ನೇಹಿತರು, ಸಂಬಂಧಿಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.