ಕೊಡಗು: ಕೊರೊನಾ ವಾರಿಯರ್ಸ್ಗೂ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಅವರು ಭೇಟಿ ನೀಡಿದ್ದ ಡಿಹೆಚ್‌ಒ ಕಚೇರಿಗೂ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸ್ ಮಾಡಲಾಗಿದೆ.
ನಿನ್ನೆಯಷ್ಟೇ ಬಂದ ಪಾಸಿಟಿವ್ ವರದಿಗಳಲ್ಲಿ ವಿರಾಜಪೇಟೆ ತಾಲೂಕಿನ ಆರೋಗ್ಯ ಕಾರ್ಯಕರ್ತರಿಬ್ಬರಿಗೆ ಕೊರೊನಾ ದೃಢಪಟ್ಟಿತ್ತು. ಇವರಿಬ್ಬರು ನಿನ್ನೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆಸಿದ್ದ ಸಭೆಗೆ ಹಾಜರಾಗಿದ್ದರು. ಆದ್ದರಿಂದ ಡಿಹೆಚ್‌ಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾಯಂ ಹಾಗೂ 120 ಹೊರ ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸಲಾಗಿದೆ.
ಕೊರೊನಾ ವಾರಿಯರ್ಸ್ಗೂ ಸೋಂಕು: ಡಿಹೆಚ್‌ಒ ಕಚೇರಿ ಸಂಪೂರ್ಣ ಸ್ಯಾನಿಟೈಸ್ ಅಲ್ಲದೆ ಸಭೆಯಲ್ಲಿ ಹಾಜರಾಗಿದ್ದ ಆರೋಗ್ಯ ಅಧಿಕಾರಿಯನ್ನು 4 ದಿನ ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸೋಂಕಿತ ಆರೋಗ್ಯ ಕಾರ್ಯಕರ್ತರು ಕಂಟೈನ್‌ಮೆಂಟ್ ಪ್ರದೇಶಗಳು ಸೇರಿದಂತೆ ಕರ್ತವ್ಯದ ನಿಮಿತ್ತ ಕೆಲಸಕ್ಕೆ ತೆರಳಿದ್ದಾಗ ಸೋಂಕು ತಗುಲಿರಬಹುದು ಎನ್ನಲಾಗಿದೆ.
ಇದಲ್ಲದೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಕೊರೊನಾ ವಾರಿಯರ್ಸ್ ಸೇರಿದಂತೆ ಜಿಲ್ಲಾಡಳಿತ ಅಧಿಕ ಸಂಖ್ಯೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸುತ್ತಿರುವುದರಿಂದ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.