ಮಡಿಕೇರಿ (ತಲಕಾವೇರಿ): ಅಕ್ಟೋಬರ್ 17 ರಂದು ಜರುಗುವ ಕಾವೇರಿ ತೀರ್ಥೋದ್ಭವ ವೀಕ್ಷಿಸಲು ಆಗಮಿಸುವ ಹೊರ ಜಿಲ್ಲೆ ಹಾಗೂ ಅಂತಾರಾಜ್ಯದ ಭಕ್ತರು ಕೋವಿಡ್ ಪರೀಕ್ಷಾ ತಪಾಸಣೆ ಸರ್ಟಿಫಿಕೇಟ್ ತರುವುದು ಕಡ್ಡಾಯ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.
ತೀರ್ಥೋದ್ಭವಕ್ಕೆ ಆಗಮಿಸುವವರು ಕೋವಿಡ್ ತಪಾಸಣಾ ಪರೀಕ್ಷೆಗೆ ಒಳಪಟ್ಟಿರಬೇಕು: ಶಾಸಕ ಬೋಪಯ್ಯ - ತಲಕಾವೇರಿ ತೀರ್ಥೋದ್ಭವ ಕಾರ್ಯಕ್ರಮ
ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ಕಾವೇರಿ ತೀರ್ಥೋದ್ಭವ ವೀಕ್ಷಿಸಲು ಬರುವ ಭಕ್ತರು ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿಯ ಸರ್ಟಿಫಿಕೇಟ್ ತರಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.
ಕಾವೇರಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ. ಕೊರೊನಾ ಸಂಖ್ಯೆಗಳು ಉಲ್ಭಣಿಸುತ್ತಿರುವುದರಿಂದ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿಯ ಸರ್ಟಿಫಿಕೇಟ್ ತರಬೇಕು. ಸ್ಥಳೀಯರು ತೀರ್ಥೋದ್ಭವ ಸಂದರ್ಭದಲ್ಲಿ ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜನ ದಟ್ಟಣೆಗೆ ಅವಕಾಶವಿಲ್ಲದಂತೆ ತೀರ್ಥ ಸಂಗ್ರಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಪೂಜಾ ವಿಧಿ-ವಿಧಾನಗಳು, ಕ್ಷೇತ್ರದ ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತಾಧಿಗಳ ಆರೋಗ್ಯ ಹಿತರಕ್ಷಣೆಗೂ ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.