ಕೊಡಗು: ಜಿಲ್ಲೆಯಲ್ಲಿ ಕೋವಿಡ್ -19 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಹಾಗೂ ಅವರ ಸಿಬ್ಬಂದಿ ಕಡ್ಡಾಯವಾಗಿ ಗಂಟಲು ದ್ರವ ಪರೀಕ್ಷೆಯನ್ನು ಮಾಡಿಕೊಳ್ಳಬೇಕೆಂದು ಆದೇಶಿಸಲಾಗಿದೆ.
ಮಡಿಕೇರಿ ನಗರ ವ್ಯಾಪ್ತಿಯ ವ್ಯಾಪಾರಿಗಳಿಗೆ ಕೋವಿಡ್- 19 ನೆಗೆಟಿವ್ ವರದಿ ಕಡ್ಡಾಯ - ಕೋವಿಡ್- 19 ಪರೀಕ್ಷೆ
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿಯನ್ನು ಮಳಿಗೆ ಮುಂದೆ ಪ್ರದರ್ಶಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಸೋಮವಾರ ದಿನಾಂಕ 24/5/2021 ರಂದು ಬೆಳಗ್ಗೆ 7 ಗಂಟೆ ಯಿಂದ 10 ಗಂಟೆವರೆಗೆ ಮಡಿಕೇರಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲು ಆರೋಗ್ಯ ಇಲಾಖೆಯಿಂದ ಶಿಬಿರ ಏರ್ಪಡಿಸಲಾಗಿದ್ದು, ವ್ಯಾಪಾರಿಗಳು ಪರೀಕ್ಷೆ ಮಾಡಿಸಿಕೊಳ್ಳಬಹುದು.
ಅಗತ್ಯ ವಸ್ತುಗಳ ಮಾರಾಟ ದಿನಗಳಾದ ಬುಧವಾರ, ಶುಕ್ರವಾರ, ಸೋಮವಾರದಂದು ವ್ಯಾಪಾರಿಗಳು ತಪಾಸಣೆ ಮಾಡಿರುವ ವರದಿಯನ್ನು ಕಡ್ಡಾಯವಾಗಿ ಮಳಿಗೆ ಮುಂದೆ ಪ್ರದರ್ಶಿಸಬೇಕು. ತರಕಾರಿ ಹಣ್ಣು ಮತ್ತಿತರ ಪದಾರ್ಥಗಳ ಬೆಲೆಯನ್ನು ಜಿಲ್ಲಾಧಿಕಾರಿ ಅವರು ನಿಗದಿಪಡಿಸಿರುವ ದರ ಪಟ್ಟಿಯಂತೆ ಮಾರಾಟ ಮಾಡಬೇಕು ಮತ್ತು ದರಪಟ್ಟಿಯನ್ನು ತಮ್ಮ ಅಂಗಡಿಯ ಮುಂದೆ ಪ್ರದರ್ಶಿಸುವಂತೆ ಮಡಿಕೇರಿ ನಗರಸಭೆಯ ಪೌರಾಯುಕ್ತರಾದ ರಾಮದಾಸ್ ಅವರು ತಿಳಿಸಿದ್ದಾರೆ.