ಕೊಡಗು (ಕುಶಾಲನಗರ) : ಎರಡು ವರ್ಷಗಳಿಂದ ನಿರಂತರವಾಗಿ ಪ್ರವಾಹ ಎದುರಿಸಿದ್ದ ಸಂತ್ರಸ್ತರು, ಕಾವೇರಿ ನದಿಯ ಹೂಳು ತೆಗೆದರೆ ಪ್ರವಾಹದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಜನರ ಒತ್ತಾಸೆಯಂತೆ 88 ಲಕ್ಷ ರೂ. ವೆಚ್ಚದಲ್ಲಿ ಮೇ ತಿಂಗಳಲ್ಲಿ ಕಾಮಗಾರಿಯನ್ನು ಮಾಡಲಾಗಿತ್ತು. ಆದರೆ, ಈ ವರ್ಷ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಪ್ರವಾಹ ಬಂದಿದ್ದು, ಹೂಳೆತ್ತುವುದಕ್ಕೆ ಬಳಸಿದ್ದ ಲಕ್ಷಾಂತರ ರೂ. ಪ್ರವಾಹದಲ್ಲಿ ಕೊಚ್ಚಿ ಹೋದಂತಾಗಿದೆ.
ಹೂಳೆತ್ತುವ ಕಾಮಗಾರಿ ಮಗಿವ ಮುನ್ನವೇ ಬಂಧ ಪ್ರವಾಹ: ಕೊಚ್ಚಿಯೋಯ್ತಾ 88 ಲಕ್ಷ ರೂ. ಯೋಜನೆ..?
ಕಾವೇರಿ ನದಿಯ ಪ್ರವಾಹ ತಡೆಯಲು ಸಂತ್ರಸ್ಥರ ಮನವಿಯಂತೆ ಕುಶಾಲನಗರ ಭಾಗದಲ್ಲಿ ಹೂಳೆತ್ತಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮತ್ತೆ ಈ ಬಾರಿ ಪ್ರವಾಹ ಬಂದಿದೆ. ಆದರೆ, ಹೂಳೆತ್ತಿದ್ದರಿಂದ ಈ ಬಾರಿ ಸ್ವಲ್ಪ ಮಟ್ಟಿಗೆ ಪ್ರವಾಹ ಕಡಿಮೆಯಾಗಿದೆ ಎಂದು ಸಂತ್ರಸ್ಥರು ಹೇಳುತ್ತಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲವರು, ಹೂಳೆತ್ತಿದ್ದರಿಂದ ಯಾವುದೇ ಪ್ರಯೋಜನ ಆಗಿಲ್ಲ, ಸುಮ್ಮನೆ ಹಣ ವ್ಯಯಿಸಲಾಗಿದೆ ಎಂದು ವಾದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದಲೂ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. 2018 ಮತ್ತು 2019 ರಲ್ಲಿ ಪ್ರವಾಹದ ಭೀಕರತೆಯಿಂದ ನಲುಗಿದ್ದ ಕುಶಾಲನಗರದ ಹಲವು ಬಡಾವಣೆಗಳ ಜನರು, ಕಾವೇರಿ ನದಿಯಲ್ಲಿ ತುಂಬಿರುವ ಹೂಳು ತೆಗೆದರೆ ಪ್ರವಾಹ ತಡೆಯಬಹುದು ಎಂದು ಜಿಲ್ಲಾಡಳಿತಕ್ಕೆ ಸಂತ್ರಸ್ತರ ವೇದಿಕೆ ಹೆಸರಿನಲ್ಲಿ ಮನವಿ ಸಲ್ಲಿಸಿದ್ದರು. ಜಿಲ್ಲಾಡಳಿತ ಕಾವೇರಿ ನೀರಾವರಿ ನಿಗಮದಿಂದ 88 ಲಕ್ಷ ರೂ. ವೆಚ್ಚದಲ್ಲಿ ಕುಶಾಲನಗರ ಭಾಗದಲ್ಲಿ ಹೂಳು ತೆಗೆಯಲು ಅನುಮೋದನೆ ನೀಡಿತ್ತು. ಸರ್ವೇ ಮಾಡಿದ್ದ ಅಧಿಕಾರಿಗಳು ಮೇ ತಿಂಗಳ ಕೊನೆಯಲ್ಲಿ ಕಾವೇರಿ ನದಿಯಲ್ಲಿ ಹೂಳು ತೆಗೆಯಲು ಆರಂಭಿಸಿದ್ದರು. ಜೂನ್ ತಿಂಗಳಲ್ಲಿ ಮಳೆ ಶುರುವಾಗಿದ್ದರಿಂದ ಕಾವೇರಿ ನದಿ ತುಂಬಿ ಹರಿಯಲು ಆರಂಭವಾಗಿತ್ತು. ಹೀಗಾಗಿ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳಲೇ ಇಲ್ಲ. ಹೀಗೆ ದಿನ ಕಳೆಯುತ್ತಲೇ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು, ಪ್ರವಾಹ ಸೃಷ್ಟಿಯಾಗಿದೆ. ಕುಶಾಲನಗರ ಭಾಗದ ರಸೂಲ್ ಲೇಔಟ್, ಸಾಯಿ, ಬಸಪ್ಪ ಮತ್ತು ಕುವೆಂಪು ಬಡಾವಣೆ ಸೇರಿದಂತೆ 10 ಕ್ಕೂ ಬಡಾವಣೆಗಳು ಜಲಾವೃತವಾಗಿದೆ. ಆದರೆ, ಕಳೆದ ಬಾರಿ ಬಡಾವಣೆಗಳಲ್ಲಿ ತುಂಬಿದ್ದ ನೀರಿಗಿಂತ 4 ಅಡಿ ನೀರು ಕಡಿಮೆಯಿತ್ತು. ಇದು ನದಿಯಲ್ಲಿ ತುಂಬಿದ್ದ ಹೂಳು ತೆಗೆದಿದ್ದರಿಂದ ಆಗಿರುವ ಅನುಕೂಲ. ಇಲ್ಲದಿದ್ದರೆ, ಕಳೆದ ಬಾರಿ ಆದಷ್ಟೇ ಸಮಸ್ಯೆ, ಈ ಬಾರಿಯೂ ಆಗುತ್ತಿತ್ತು. ಆದರೆ, ಇದನ್ನು ಸಹಿಸದ ಕೆಲವರು ನಮ್ಮ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನುತ್ತಾರೆ ಸಂತ್ರಸ್ತರ ವೇದಿಕೆಯ ಮುಖಂಡರು.
ಕಾವೇರಿ ನದಿಯಲ್ಲಿ ಹೂಳು ತೆಗೆಯುವುದೇ ಅವೈಜ್ಞಾನಿಕ. ಮಳೆ ಬಂದಾಗ ಬರೋಬ್ಬರಿ 40 ರಿಂದ 50 ಸಾವಿರ ಕ್ಯೂಸೆಕ್ ನೀರು ನದಿಯಲ್ಲಿ ಹರಿಯುತ್ತದೆ. ಸದ್ಯ ಕಾಮಗಾರಿ ಮಾಡಿ 400 ರಿಂದ 500 ಲೋಡ್ ಮಣ್ಣು ತೆಗೆದಿರಬಹುದು. ಇದರಿಂದ ಈ ಬಾರಿ ಪ್ರವಾಹದ ಪ್ರಮಾಣ ತಗ್ಗಿದೆ ಎನ್ನುವುದು ಮೂರ್ಖತನ. ಈ ಬಾರಿ ಮಳೆ ಕಡಿಮೆಯಾಗಿದ್ದು, ಕುಶಾಲನಗರ ಭಾಗದಲ್ಲಿ ಅಷ್ಟೇ ಅಲ್ಲ. ಸಿದ್ದಾಪುರ, ಬಲಮುರಿ ಎಲ್ಲೆಡೆಯೂ ಪ್ರವಾಹ ಕಡಿಮೆಯೇ ಇತ್ತು. ಇವರು ತೆಗೆದಿರುವ ಗಿಡಗಂಟಿಗಳಿಂದ ಯಾವುದೇ ಲಾಭವಾಗಿಲ್ಲ. ಕುಶಾಲನಗರ ಸುತ್ತಮುತ್ತಲಿನ 10 ಕ್ಕೂ ಹೆಚ್ಚು ನದಿ ಬಫರ್ ಝೋನ್ ಪ್ರದೇಶಗಳಿಗೆ ಮಣ್ಣು ಮುಚ್ಚಿ ಲೇಔಟ್ ನಿರ್ಮಿಸಲಾಗಿದೆ. ಮತ್ತೊಂದೆಡೆ ಎಲ್ಲಿಯೂ ಚೆಕ್ ಡ್ಯಾಂ ಅಥವಾ ಬ್ಲಡ್ ಡ್ಯಾಂ ಗಳನ್ನೇ ನಿರ್ಮಿಸದೇ ನದಿಯಲ್ಲಿ ಹೂಳು ತೆಗೆಯುತ್ತೇವೆ ಎಂದು 88 ಲಕ್ಷ ರೂಪಾಯಿ ಸಾರ್ವಜನಿಕರ ತೆರಿಗೆಯ ಹಣವನ್ನು ಪೋಲು ಮಾಡಲಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.
ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ಪ್ರವಾಹವನ್ನು ತಡೆಯಲು ನದಿಯ ಹೂಳು ತೆಗೆಯುವ ಹೆಸರಿನಲ್ಲಿ 88 ಲಕ್ಷ ರೂ ಹಣ ಪೋಲಾಯಿತೇ ಎನ್ನುವ ಅನುಮಾನ ಮೂಡಿದೆ.