ಕೊಡಗು: ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಮಂಜಿನ ನಗರಿ ಕೊಡಗು ಅಕ್ಷರಶಃ ಮಂಜುಗಡ್ಡೆಯಂತಾಗಿದೆ.
ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಮಳೆ: ಸೆ. 22ರವರೆಗೆ ರೆಡ್ ಅಲರ್ಟ್
ಕೊಡಗು ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಜಿಲ್ಲಾಡಳಿತ ಇಂದಿನಿಂದ ಸೆ. 22ರವರೆಗೆ ರೆಡ್ ಅಲರ್ಟ್ ಘೋಷಿಸಿದೆ.
ಮಡಿಕೇರಿಯ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದ್ದು, ನಾಪೋಕ್ಲು, ಸುಂಟಿಕೊಪ್ಪ, ಮಾದಾಪುರದಲ್ಲೂ ನಿರಂತರವಾಗಿ ಮಳೆಯಾಗುತ್ತಿದೆ. ಚಿಕ್ಕ-ಪುಟ್ಟ ಹಳ್ಳ-ಕೊಳ್ಳಗಳು ಹಾಗೂ ಕಾವೇರಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಹಾಗೆಯೇ ಕರಡಿಗೂಡು, ಸಿದ್ಧಾಪುರ, ನೆಲ್ಯಹುದಿಕೇರಿ, ಬೆಟ್ಟದಕಾಡು ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಮಡಿಕೇರಿ, ಗಾಳಿಬೀಡು, ಕಾಲೂರು, ಮೂರ್ನಾಡು, ಸೋಮವಾರಪೇಟೆ, ಕುಶಾಲನಗರ, ಕೂಡಿಗೆ ಸುತ್ತಮುತ್ತ ನಿರಂತರವಾಗಿ ಮಳೆ ಸುರಿಯುತ್ತಿದೆ.
ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಹಾಗಾಗಿ ಜಿಲ್ಲಾಡಳಿತ ಇಂದಿನಿಂದ ಸೆ. 22ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಗುಡ್ಡಗಾಡು ಮತ್ತು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.