ಕೊಡಗು :ಸೆಪ್ಟೆಂಬರ್ ಅರ್ಧ ತಿಂಗಳು ಮುಗಿಯಲು ಬಂದಿದ್ದರೂ ಜಿಲ್ಲೆಯಲ್ಲಿ ಮಾತ್ರ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಕಳೆದ ಮೂರು ದಿನಗಳಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ನದಿ ಪಾತ್ರ ಮತ್ತು ಬೆಟ್ಟ ಪ್ರದೇಶಗಳ ಜನ ಯಾವಾಗ ಏನು ಗಂಡಾಂತರ ಎದುರಾಗುವುದೋ ಎಂದು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ಕೊಡಗಿನಲ್ಲಿ ಮತ್ತೆ ಮುಂದುವರೆದ ಮಳೆ ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೀಕರ ಪ್ರವಾಹ ಮತ್ತು ಭೂಕುಸಿತ ಇಲ್ಲಿನ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದೆ. 2018-19ರಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿಯುತ್ತಿದ್ದ ಮಳೆ ಸೆಪ್ಟೆಂಬರ್ ಎನ್ನುವಷ್ಟರಲ್ಲಿ ಸಂಪೂರ್ಣ ನಿಂತು ಬಿಡುತಿತ್ತು. ಆದರೆ, ಈ ಬಾರಿ ಸೆಪ್ಟೆಂಬರ್ ಅರ್ಧ ತಿಂಗಳು ಕಳೆಯಲು ಬಂದಿದ್ದರೂ, ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.
ಮೂರು ದಿನಗಳಿಂದ ತಲಕಾವೇರಿ, ಬ್ರಹ್ಮಗಿರಿಬೆಟ್ಟ, ಭಾಗಮಂಡಲ, ನಾಪೋಕ್ಲು ಸೇರಿ ಕಾವೇರಿ ನದಿಪಾತ್ರದ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲದ ಸುತ್ತಮುತ್ತ ಕಳೆದ 24 ಗಂಟೆ ಅವಧಿಯಲ್ಲಿ 61 ಮಿ.ಮೀಟರ್ ಮಳೆ ಸುರಿದಿದೆ. ತ್ರಿವೇಣಿ ಸಂಗಮ ಭರ್ತಿಯಾಗುವ ಹಂತ ತಲುಪಿದೆ. ತ್ರಿವೇಣಿ ಸಂಗಮ ಮುಳುಗಡೆಯಾಯಿತೆಂದ್ರೆ, ನಾಪೋಕ್ಲು, ಚೆರಿಯಪರಂಬು, ಕರಡಿಗೋಡು, ಕಕ್ಕಟ್ಟುಕಾಡು, ಗುಹ್ಯ, ಕುಂಬಾರಗುಂಡಿ ಸೇರಿ ಹತ್ತಾರು ಹಳ್ಳಿಗಳಲ್ಲಿ ಪ್ರವಾಹ ಉಂಟಾಗಲಿದೆ. ಸ್ವಲ್ಪವೇ ಜಾಸ್ತಿ ಮಳೆ ಬಂದರೂ ಕಾವೇರಿ ಪ್ರವಾಹ ನೀರು ಮೊದಲು ನುಗ್ಗುವುದೇ ಕರಡಿಗೋಡಿನಲ್ಲಿ. ಹೀಗಾಗಿ, ಆಗಸ್ಟ್ ತಿಂಗಳಲ್ಲಿ ಪ್ರವಾಹ ಸ್ಥಿತಿ ಅನುಭವಿಸಿ ಇನ್ನೂ ನಿಟ್ಟುಸಿರು ಬಿಡಲು ಆಗಿಲ್ಲ. ಆದರೆ, ಮತ್ತೆ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಕಾವೇರಿ ಉಗಮಸ್ಥಾನ ತಲಕಾವೇರಿ, ಬ್ರಹ್ಮಗಿರಿಬೆಟ್ಟ ಭಾಗಮಂಡಲದಲ್ಲಿ ಹೆಚ್ಚು ಮಳೆಸುರಿಯಿತೆಂದ್ರೆ, ಕಾವೇರಿ ಪ್ರವಾಹ ಎದುರಾಗುವುದು ಕಟ್ಟಿಟ್ಟ ಬುತ್ತಿ. ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ನದಿಪಾತ್ರದ ಜನರ ನೆಮ್ಮದಿ ಕಿತ್ತುಕೊಂಡಿದ್ರೆ, ತಲಕಾವೇರಿ, ಬ್ರಹ್ಮಗಿರಿ ಬೆಟ್ಟದಲ್ಲಿ ಸುರಿಯುತ್ತಿರುವ ಮಳೆ ಕೋಳಿಕಾಡು, ಚೇರಂಗಾಲ, ಕೋರಂಗಾಲ ಸೇರಿ ಹಲವು ಹಳ್ಳಿಗಳ ಜನರಿಗೆ ಬೆಟ್ಟ ಕುಸಿಯುವ ಆತಂಕ ಮೂಡಿಸಿದೆ.
ಆಗಸ್ಟ್ ತಿಂಗಳಲ್ಲಿ ಕುಸಿದಿದ್ದ ಗಜಗಿರಿಬೆಟ್ಟದಲ್ಲಿ ಮತ್ತಷ್ಟು ಬಿರುಕು ಇದೆ ಎನ್ನಲಾಗುತ್ತಿದೆ. ಅಲ್ಲದೆ ತಲಕಾವೇರಿಯ ಸಮೀಪದ ಬೆಟ್ಟವೊಂದರಲ್ಲಿ ಅಧಿಕಾರಿಯೊಬ್ಬ ಅಕ್ರಮವಾಗಿ ಬೆಟ್ಟ ಕೊರೆದು ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದ. ಈ ಪ್ರದೇಶದಲ್ಲಿ ಬೆಟ್ಟ ಬಿರುಕು ಬಿಟ್ಟಿವೆ. ಮಳೆ ಹೀಗೆ ಮುಂದುವರೆದ್ರೆ ಬಿರುಕು ಬಿಟ್ಟಿದೆ ಎನ್ನಲಾಗುತ್ತಿರುವ ಕುಸಿದು ಉಳಿದಿರುವ ಗಜಗಿರಿ ಬೆಟ್ಟ ಮತ್ತು ಚೇರಂಗಾಲ ಬೆಟ್ಟಗಳು ಕುಸಿಯುವ ಆತಂಕ ಜನರಿಗಿದೆ. ಒಂದು ವೇಳೆ ಈ ಬೆಟ್ಟಗಳು ಕುಸಿದಲ್ಲಿ ಚೇರಂಗಾಲ, ಕೋರಂಗಾಲ ಮತ್ತು ಕೋಳಿಕಾಡು ಗ್ರಾಮಗಳು ಸಂಪೂರ್ಣ ಅಪಾಯಕ್ಕೆ ಸಿಲುಕಲಿವೆ. ಹೀಗಾಗಿಯೇ ಮಳೆ ಜೋರಾದಂತೆ ಜನರಿಗೆ ಪ್ರಾಣಭೀತಿ ಎದುರಾಗುತ್ತದೆ.