ಕೊಡಗು:ಕಾಂಗ್ರೆಸ್ ರಾಜೀನಾಮೆ ಪರ್ವ ಹೊಸತೇನಲ್ಲ. ಅದು ಅವರ ನಿರಂತರ ನಾಟಕ. ಮಂತ್ರಿಗಿರಿ ಹಾಗೂ ಅಧಿಕಾರಕ್ಕೆ ನಡೆಸುತ್ತಿರೋ ನಾಟಕ ಎಂದು ಎಂಎಲ್ಸಿ ತೇಜಸ್ವಿನಿ ರಮೇಶ್ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಶಾಸಕರ ಸರಣಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಹಧರ್ಮ ಪಾಲನೆ ಮಾಡೋಕೆ ಅವರಿಗೆ ಆಗ್ತಿಲ್ಲ. ಬ್ಲಾಕ್ಮೇಲ್ ತಂತ್ರಗಾರಿಕೆ ಮೂಲಕ ಅಧಿಕಾರ ಹಿಡಿಯುವ ನಾಟಕ ಆಡುತ್ತಿದ್ದಾರೆ. ಅವರಿಗೆ ವಿವೇಕ ಇದ್ದರೆ ಸರಿಯಾಗಿ ಸರ್ಕಾರ ನಡೆಸಬೇಕು. ಇಲ್ಲದಿದ್ದರೆ ಸರ್ಕಾರ ವಿಸರ್ಜಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಂಎಲ್ಸಿ ತೇಜಸ್ವಿನಿ ರಮೇಶ್ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರದ್ದು ಒಂದು ರೀತಿಯ ನಾಟಕವಾದರೆ, ಶಾಸಕರದ್ದು ಮತ್ತೊಂದು ರೀತಿಯ ನಾಟಕ. ಇವರುಗಳು ಹುಡುಗಾಟಿಕೆ ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಾಜೀನಾಮೆ ಸ್ವೀಕರಿಸೋಕೆ ಸ್ಪೀಕರ್ ನಿರಾಕರಿಸಿದಾಗಲೇ ಇದೆಲ್ಲಾ ನಾಟಕ ಎಂದು ಗೊತ್ತಾಗುತ್ತೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಇವೆಲ್ಲಾ ಬೆಳವಣಿಗೆಗಳನ್ನು ಪರಿಗಣಿಸಿ ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು. ನಮ್ಮೊಂದಿಗೆ ಇರುವವರು ಬಿಜೆಪಿ ಶಾಸಕರು ಅಷ್ಟೇ. ಬಿಜೆಪಿ ಯಾವತ್ತೂ ಅಧಿಕಾರಕ್ಕೆ ರಾಜಕಾರಣ ಮಾಡಲ್ಲ ಎಂದು ಆಪರೇಷನ್ ಕಮಲ ವಿಷಯಕ್ಕೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.