ಕೊಡಗು:ತಾಯಿ ಕೊರೊನಾದಿಂದ ಮೃತಪಟ್ಟ ಬಳಿಕ ನಾಪತ್ತೆಯಾದ ಮೊಬೈಲ್ ಅನ್ನು ಹುಡುಕಿ ಕೊಡುವಂತೆ ಬಾಲಕಿ ಪತ್ರ ಬರೆದಿದ್ದಳು. ಇದಕ್ಕೆ ಸ್ಪಂದಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಾಲಕಿಗೆ ಹೊಸ ಮೊಬೈಲ್ ಕೊಡಿಸಿದ್ದಾರೆ. ಕಾಂಗ್ರೆಸ್ನ ಈ ನಡೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಮೇ 16 ರಂದು ಕೋವಿಡ್‌ನಿಂದ ಬಾಲಕಿಯ ತಾಯಿ ಮೃತಪಟ್ಟಿದ್ದರು. ಆ ವೇಳೆ ತಾಯಿಯ ಬಳಿಯಿದ್ದ ಮೊಬೈಲ್ ಸಿಕ್ಕಿರಲಿಲ್ಲ. ಕೊರೊನಾದಿಂದ ತಾಯಿ ಕಳೆದುಕೊಂಡ ಮಗಳು ಭಾವನಾತ್ಮಕ ಪತ್ರ ಬರೆದಿದ್ದಳು. ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ.. ನನ್ನ ತಾಯಿಯ ಬಳಿ ಇರುವ ಮೊಬೈಲ್‌ವೊಂದೇ ನನಗೆ ನೆನಪು. ಆ ಮೊಬೈಲನ್ನು ಹುಡುಕಿಕೊಡಿ ಎಂದು ಡಿಸಿ, ಶಾಸಕರಿಗೆ ಬಹಿರಂಗ ಪತ್ರ ಬರೆದಿದ್ದಳು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಚಾರ ಯುವ ಕಾಂಗ್ರೆಸ್ ಮುಖಂಡರಿಗೆ ತಿಳಿಯುತ್ತಿದ್ದಂತೆ ಬಾಲಕಿಗೆ ಒಂದು ಹೊಸ ಮೊಬೈಲ್ ತಂದು ಕೊಟ್ಟಿದ್ದಾರೆ. ದುರಂತ ಅಂದ್ರೆ ಹುಡುಗಿ ಕೇಳಿದ್ದು ತಾಯಿಯ ಫೋಟೋಗಳು ಇರುವ, ತಾಯಿ ಉಪಯೋಗಿಸುತ್ತಿದ್ದ ಮೊಬೈಲ್ ಬೇಕು ಅಂತ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಹೊಸ ಮೊಬೈಲ್ ಕೊಡಿಸಿ ಟೀಕೆಗೆ ಗುರಿಯಾಗಿದ್ದಾರೆ.