ಮಡಿಕೇರಿ :ನಗರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅಭಿಯಾನಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚಾಲನೆ ನೀಡಿದರು. ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸುರ್ಜೇವಾಲಾ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹ ಧನ ಮತ್ತು ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಶೇ40ರಷ್ಟು ಕಮಿಷನ್ ಸರ್ಕಾರವಿದೆ. ದೇಶದಲ್ಲಿ ಲಂಚಾವತಾರ ಹೆಚ್ಚಾಗಿದೆ. ಇಂದು ಸಾಮಾನ್ಯ ಜನರು ಜೀವನ ಮಾಡಲು ಕಷ್ಟಪಡುವಂತಾಗಿದೆ. ರಾಜ್ಯ ಪ್ರವಾಹದಲ್ಲಿ ತತ್ತರಿಸಿದ್ದಾಗ ಯಾರು ಬಂದು ನೋಡಲಿಲ್ಲ. ಈಗ ವೋಟಿಗಾಗಿ ಮಾತ್ರ ರಾಜ್ಯಕ್ಕೆ ಆಗಾಗ ಬರುತ್ತಿದ್ದಾರೆ. ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡರು, ಕೆಲವು ಹತ್ಯಗಳು ನಡೆದವು. ಆ ಸಮಯದಲ್ಲಿ ಬಿಜೆಪಿ ಮುಖಂಡರು ಯಾರೂ ಭೇಟಿ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಂಚ ಮುಕ್ತ ಕನಾ೯ಟಕದ ಗುರಿ :ರಾಜ್ಯ ಸಕಾ೯ರದ ಬಜೆಟ್ 3.10 ಲಕ್ಷ ಕೋಟಿಗಳಾಗಿದೆ. ಶೇ.40ರಷ್ಟು ಕಮಿಷನ್ ಎಂದಾದರೆ 1.12 ಲಕ್ಷ ಕೋಟಿ ರೂಪಾಯಿ ಲಂಚಕ್ಕೆ ವಿನಿಯೋಗವಾಗುತ್ತದೆ. ಈ ಕಮಿಷನ್ ಹಣವನ್ನು ರಾಜ್ಯದ ಜನತೆಗೆ ಸೌಲಭ್ಯಗಳ ಮೂಲಕ ನೀಡಲು ಬಳಸುವುದಾಗಿ ಸುರ್ಜೇವಾಲ ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೇ ಲಂಚ ಮುಕ್ತ ಕನಾ೯ಟಕದ ಗುರಿ ಹೊಂದುವುದು ಮತ್ತು ಕಾಂಗ್ರೆಸ್ನ ಯಾವುದೇ ನಾಯಕರು ಲಂಚ ಪಡೆದದ್ದು ಗೊತ್ತಾದಲ್ಲಿ ಅಂಥವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡುವುದಾಗಿ ಹೇಳಿದರು. ಬಿಜೆಪಿ ಈಗ ದ್ವೇಷ ರಾಜಕೀಯಕ್ಕೆ ಮುಂದಾಗಿ ಕಾಂಗ್ರೆಸ್ ನಾಯಕರನ್ನು ಮುಗಿಸಿ ಎಂಬಂಥ ಕೀಳು ಹೇಳಿಕೆ ನೀಡುತ್ತಿದೆ ಎಂದರು.
ಕಾಂಗ್ರೆಸ್ ಕಾರ್ಡ್ ಅಭಿಯಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಎಐಸಿಸಿ ಕಾರ್ಯದರ್ಶಿ, ಕೊಡಗು ಉಸ್ತುವಾರಿ ಹಾಗೂ ಕೇರಳ ಶಾಸಕ ರೋಜಿ ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ , ಮುಖಂಡರಾದ ಬಿ.ಎ ಜೀವಿಜಯ, ಎ.ಎಸ್ ಪೊನ್ನಣ್ಣ, ಡಾ.ಮಂಥರ್ ಗೌಡ, ಹರಪಳ್ಳಿ ರವೀಂದ್ರ, ಹೆಚ್.ಎಸ್ ಚಂದ್ರಮೌಳಿ, ವೀಣಾ ಅಚ್ಚಯ್ಯ, ಕೆ.ಪಿ ಚಂದ್ರಕಲಾ, ಟಿ.ಪಿ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಬಿಜೆಪಿಯದ್ದು ಡಬಲ್ ಭ್ರಷ್ಟಾಚಾರ ಸರ್ಕಾರ : ಬಿಜೆಪಿಯವರದ್ದು ಡಬಲ್ ಇಂಜಿನ್ ಸರಕಾರವಲ್ಲ, ಡಬಲ್ ಕರಪ್ಷನ್ ಸರಕಾರ. ಬಿಜೆಪಿ ಸರಕಾರ ರಾಜ್ಯವನ್ನು ಮಾರಾಟಕ್ಕೆ ಇಟ್ಟಿದೆ. ರಾಜ್ಯದ ಬಜೆಟ್ ನಲ್ಲೂ ಬಿಜೆಪಿ ಕಮಿಷನ್ ಇಟ್ಟುಕೊಳ್ಳುತ್ತಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಮಂಗಳೂರು ನಗರದ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪ್ರಮುಖ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ 40% ಕಮಿಷನ್ ಸರಕಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ. ದೇಶದ ಎಲ್ಲೆಡೆಯೂ ಬಸವರಾಜ ಬೊಮ್ಮಾಯಿಯವರು 40% ಸಿಎಂ, ಪೇ ಸಿಎಂ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದಾರೆ. ಕಾಂಗ್ರೆಸ್ ಮಾತ್ರ 40% ಕಮಿಷನ್ ಸರಕಾರದ ಬಗ್ಗೆ ಮಾತನಾಡುತ್ತಿಲ್ಲ. ಗುತ್ತಿಗೆದಾರರು, ಸ್ಕೂಲ್ ಅಸೋಸಿಯೇಷನ್ ನವರು ಈ ಬಗ್ಗೆ ಆರೋಪಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ತಮ್ಮದೇ ಪಕ್ಷದ ಮುಖಂಡ, ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ್ ಅವರನ್ನೇ ಲೂಟಿ ಮಾಡಿದರು. ಇನ್ನು ರಾಜ್ಯವನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದರು. ಸ್ವತಃ ಬಿಜೆಪಿ ಮುಖಂಡರಾಗಿದ್ದ ಸಂತೋಷ್ ಪಾಟೀಲ್ ಅವರು 40 ಪರ್ಸೆಂಟ್ ಕಮಿಷನ್ ನೀಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಾಜ್ಯದ ಅನೇಕ ಗುತ್ತಿಗೆದಾರರು ಸಾವಿಗೆ ಶರಣಾಗಿದ್ದಾರೆ. ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಅವರೇ, ನಿಮಗೆಷ್ಟು ಹಣ ಬೇಕು ಹೇಳಿ, ನಾವು ಸಂಗ್ರಹಿಸಿ ಕೊಡ್ತೀವಿ. ಆದರೆ ಮೃತಪಟ್ಟ ಸಂತೋಷ್ ಪಾಟೀಲ್ರನ್ನು ವಾಪಸ್ ತರುತ್ತೀರಾ? ನಿಮ್ಮ ಲೂಟಿ ನಿಲ್ಲುವುದು ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.