ಮಡಿಕೇರಿ(ಕೊಡಗು): ಕೋವಿಡ್-19 ನಿಯಂತ್ರಣ ಸಂಬಂಧ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ವಿಡಿಯೋ ಸಂವಾದದ ಮೂಲಕ ಮಾಹಿತಿ ಪಡೆದು ಮಾತನಾಡಿದ ಅವರು, ವಾರಾಂತ್ಯದ ಕರ್ಫ್ಯೂ ಸಡಿಲಿಕೆ ಮಾಡುವಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆ ಮಾಡುವಂತಾಗಬೇಕು ಎಂದರು. ಇದರ ಜೊತೆಗೆ ವ್ಯಾಕ್ಸಿನೇಷನ್ ಶೇಕಡಾವಾರು ಗುರಿ ಸಾಧಿಸಲು ಸೂಚನೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಅಲ್ಲಿನ ಆಡಳಿತ ವರ್ಗದೊಂದಿಗೆ ಕೋವಿಡ್ ವಿಚಾರವಾಗಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, 29 ಗ್ರಾಮಗಳಲ್ಲಿ ಶೇ. 5ಕ್ಕಿಂತಲೂ ಹೆಚ್ಚಿನ ಪ್ರಕರಣಗಳಿದ್ದು, 4 ಗ್ರಾಮಗಳಲ್ಲಿ ಶೇ.10 ಕ್ಕಿಂತಲೂ ಹೆಚ್ಚು ಹಾಗೂ 2 ಗ್ರಾಮಗಳಲ್ಲಿ 20 ಕ್ಕಿಂತಲೂ ಹೆಚ್ಚಿನ ಪ್ರಕರಣಗಳು ಕಂಡುಬಂದಿದೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ಶೇ.81.3 ರಷ್ಟು ಲಸಿಕಾ ಗುರಿ ಪೂರ್ಣಗೊಳಿಸಲಾಗಿದೆ. 22 ಗಡಿ ಭಾಗಗಳನ್ನು ಗುರುತಿಸಿ 23 ಸಾವಿರ ಲಸಿಕಾ ಗುರಿಯನ್ನು ಹೊಂದಿದ್ದು, ಶೇ.82 ರಷ್ಟು ಪೂರ್ಣಗೊಳಿಸಲಾಗಿದೆ ಎಂದರು.