ಮಡಿಕೇರಿ(ಕೊಡಗು): ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುತ್ತಿದ್ದು, ತಾಲೂಕಿನ ತಾವೂರಿನ ಚೆದುಕಾರ್ ಮೇಲ್ಸೇತುವೆ ಮೇಲೆ ಪ್ರವಾಹದಂತೆ ನೀರು ಹರಿಯುತ್ತಿದೆ.
ಉಕ್ಕಿ ಹರಿಯುತ್ತಿರುವ ಕಾವೇರಿ, ಚೆದುಕಾರ್ ಮೇಲ್ಸೇತುವೆ ಮುಳುಗಡೆ: ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ - ಮಡಿಕೇರಿ ಪ್ರವಾಹ
ಮಡಿಕೇರಿಯಲ್ಲಿ ಈ ಬಾರಿಯೂ ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದು, ಪ್ರವಾಹ ಭೀತಿ ಎದುರಾಗಿದೆ. ಮಡಿಕೇರಿ-ಭಾಗಮಂಡಲ ಸಂಪರ್ಕಿಸುವ ಚೆದುಕಾರ್ ಮೇಲ್ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಭಾಗಮಂಡಲ, ತಲಕಾವೇರಿಗೆ ತೆರಳಲು ಪರ್ಯಾಯ ಮಾರ್ಗ ಇಲ್ಲದಂತಾಗಿದೆ.
ತಾವೂರಿನ ಚೆದುಕಾರು ಸೇತುವೆ ಮೇಲೆ ಸುಮಾರು 8 ಅಡಿಯಷ್ಟು ಪ್ರಮಾಣದ ನೀರು ಹರಿಯುತ್ತಿರುವುದರಿಂದ ಮಡಿಕೇರಿ ಮಾರ್ಗವಾಗಿ ಭಾಗಮಂಡಲ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಈ ವ್ಯಾಪ್ತಿಯಲ್ಲಿನ ಗದ್ದೆಗಳು ಹಾಗೂ ಕಾಫಿ ತೋಟಗಳು ಜಲಾವೃತವಾಗಿದ್ದು, ಪ್ರವಾಹದಂತೆ ಹರಿಯುತ್ತಿರುವ ನೀರಿನ ಸೆಳೆತಕ್ಕೆ ಯಾವ ವಾಹನಗಳೂ ಸಹ ರಸ್ತೆಗಿಳಿಯುತ್ತಿಲ್ಲ. ಈ ಸೇತುವೆ ಮುಳುಗಡೆಯಿಂದಾಗಿ ತಲಕಾವೇರಿಯಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಅರ್ಚಕರ ಕುಟುಂಬದ 6 ಜನರ ಶೋಧ ಕಾರ್ಯಕ್ಕೂ ತೊಡಕಾಗಿದೆ.
ಜೀಪ್‌ಗಳ ಮೂಲಕ ಎನ್‌ಡಿಆರ್‌ಎಫ್ ತಂಡಗಳು ರಸ್ತೆ ದಾಟಿದ್ದರೆ, ಇನ್ನೂ ಕೆಲವರು ಪ್ರವಾಹದ ಭೀತಿಯಿಂದ ಹಿಂದೆ ಸರಿದಿದ್ದಾರೆ. ತಲಕಾವೇರಿಗೆ ಹೋಗಲು ಇದೊಂದೇ ಮಾರ್ಗ ಇರುವುದರಿಂದ ದುರ್ಘಟನಾ ಸ್ಥಳಕ್ಕೆ ಹೊರಟಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಅಧಿಕಾರಿಗಳಿಗೆ ಅಡ್ಡಿಯಾಗಿದೆ.