ಮಡಿಕೇರಿ(ಕೊಡಗು): ಜಿಲ್ಲೆಯಲ್ಲಿ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಸಾಕಷ್ಟು ನಷ್ಟವಾಗಿದೆ. ಜಲಪ್ರಳಯದ ಹೊಡೆತಕ್ಕೆ ಸಿಲುಕಿ ಜನರು ನಲುಗಿದ್ದಾರೆ. ಮಳೆಯಿಂದ ಆಗಿರುವ ಹಾನಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಕೆಲವು ಭಾಗಗಳಲ್ಲಿ ಪರಿಶೀಲನೆ ನಡೆಸಿದೆ.
ಮಡಿಕೇರಿ ತಾಲೂಕಿನ ಸೀಮೆಹುಲ್ಲು ಕಜೆ ಬಳಿ ಉಂಟಾಗಿರುವ ಭೂ ಕುಸಿತ, ಕಾಫಿ ಬೆಳೆ ಹಾನಿ, ಮದೆನಾಡು ಬಳಿಯ ಕರ್ತೋಜಿ ಹೆದ್ದಾರಿ, ಕೊಯನಾಡು ಶಾಲೆ ಬಳಿ ಭೂ ಕುಸಿತ ಹಾಗೂ ಕಿಂಡಿ ಆಣೆಕಟ್ಟು ಪ್ರದೇಶವನ್ನು ವೀಕ್ಷಿಸಿದ್ದಾರೆ. ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡ ಜಿಲ್ಲಾಧಿಕಾರಿ ಡಾ.ಸತೀಶ್ ಅವರಿಂದ ಮಾಹಿತಿ ಪಡೆದರು.