ಕೊಡಗು:ಮಳೆ ಹಾಗೂ ಭೂ ಕುಸಿತಕ್ಕೆ ಒಳಗಾಗಿ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಇಂದು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ಪರಿಸ್ಥಿತಿ ಪರಿಶೀಲನೆ
ಆಗಸ್ಟ್ ತಿಂಗಳಿನಲ್ಲಿ ಸುರಿದ ಭೀಕರ ಮಳೆಯಿಂದಾಗಿ ಕೊಡಗು ಜಿಲ್ಲೆಯ ಹಲವಾರು ಭಾಗಗಳಲ್ಲಿ ಪ್ರವಾಹ ಉಂಟಾಗಿತ್ತು. ಪರಿಣಾಮ ಭೂ ಕುಸಿತ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಹಾನಿಗೊಳಗಾದ ಪ್ರದೇಶಗಳ ಪರಿಶೀಲನಗೆ ಇಂದು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಲಿದೆ.
ಭಾರತ ಸರ್ಕಾರದ ಆರ್ಥಿಕ ಇಲಾಖೆ ನಿರ್ದೇಶಕಿ ಎಸ್.ಸಿ.ಮೀನಾ, ಕೃಷಿ ಸಹಾಯ ಮತ್ತು ರೈತ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪುನ್ನುಸ್ವಾಮಿ ಸೇರಿದಂತೆ ವಿವಿಧ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಇದೇ ಆಗಸ್ಟ್ ಎರಡನೇ ವಾರದಿಂದ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಪಾತ್ರದ ಗ್ರಾಮಗಳಾದ ಕರಡಿಗೂಡು, ನೆಲ್ಯಹುದಿಕೇರಿ, ಗುಹ್ಯ ಹಾಗೂ ಭೇತ್ರಿ ಸೇರಿದಂತೆ ಹಲವೆಡೆ ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಹಾಗೆಯೇ ವಿರಾಜಪೇಟೆ ತಾಲೂಲಿನ ತೋರ ಗ್ರಾಮದಲ್ಲಿ ಬೃಹತ್ ಗುಡ್ಡ ಕುಸಿದು ಹಲವು ಮಂದಿ ಕಣ್ಮರೆ ಆಗಿದ್ದಾರೆ. ಇನ್ನು ಮಾಕುಟ್ಟ - ಕೇರಳ ಅಂತಾರಾಜ್ಯ ಸಂಪರ್ಕಿಸುವ ರಸ್ತೆ ಹಾಳಾಗಿದ್ದು, ತಾತ್ಕಾಲಿಕವಾಗಿ ಲಘು ವಾಹನಗಳ ಓಡಾಟಕ್ಕೆ ಮಾತ್ರ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.