ಮಡಿಕೇರಿ:ಕಾವೇರಿ ಜನ್ಮ ಸ್ಥಳ ಕೊಡಗಿನ ತಲಕಾವೇರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ 4 ನಿಮಿಷಕ್ಕೆ ಕನ್ಯಾ ಲಗ್ನದಲ್ಲಿ ತೀರ್ಥೋದ್ಭವ ಆಗಿದೆ. ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಿದ್ದಾಳೆ.
ಜೈಜೈ ಮಾತಾ ಕಾವೇರಿ ಮಾತಾ ಎಂದು ದೇವಿಯನ್ನು ಪಟಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಕೋವಿಡ್-19 ಹಿನ್ನೆಲೆ ತೀರ್ಥೋದ್ಭವ ಸಂದರ್ಭದಲ್ಲಿ ಸೀಮಿತ ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಪವಿತ್ರ ಬ್ರಹ್ಮಕುಂಡಿಕೆ ಮತ್ತು ಕೊಳದ ಸುತ್ತ ಭಜನೆ ಮಾಡಿದ ನೂರಾರು ಭಕ್ತರು ತೀರ್ಥೋದ್ಭವ ಕಣ್ತುಂಬಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಕ್ಷಮಾಮಿಶ್ರಾ ಹಾಗೂ ಎಂಎಲ್‌ಸಿ ಸುನೀಲ್ ಸುಬ್ರಹ್ಮಣಿ ಸೇರಿದಂತೆ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು.
ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ ಮಾತೆ ತೀರ್ಥ ಪಡೆದುಕೊಳ್ಳಲು ನೂಕುನುಗ್ಗಲು ಆಗದಂತೆ ಕೊಳದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಲ್ಲದೆ ತೀರ್ಥ ವಿತರಣೆಗೆ ಐದು ಕೌಂಟರ್ ತೆರೆಯಲಾಗಿದ್ದು, ಪ್ರತಿ ಕೌಂಟರ್ ಬಳಿ ತಲಾ ಎರಡು ಮೂರು ಕೊಳಾಯಿಗಳನ್ನು ಇಟ್ಟು ವ್ಯವಸ್ಥೆ ಮಾಡಲಾಗಿದೆ.
ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಕೊಳದಲ್ಲಿ ಪುಣ್ಯ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ.